ಬೆಂಗಳೂರು : ಅದು ಕರಾವಳಿಯಲ್ಲಿ ಕಿಚ್ಚು ಹಚ್ಚಿದಂತಹ ಕೊಲೆ ಪ್ರಕರಣ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರುನನ್ನ ಭೀಕರವಾಗಿ ಹತ್ಯೆಗೈಯಲಾಗಿತ್ತು. ಕೊಲೆ ನಡೆದು ಎಂಟು ತಿಂಗಳಾದ್ರು,ಅದರ ಸಂಚುಕೋರ ಮಾತ್ರ ಇನ್ನೂ ಸಿಕ್ಕಿರಲಿಲ್ಲ. ಅದ್ರೆ ನಿನ್ನೆ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಬೆಂಗಳೂರಿನಲ್ಲೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಹಾಗಾದ್ರೆ ಆ ಆರೋಪಿ ಯಾರು? ಎನ್ಐಎ ಮಿಂಚಿನ ಕಾರ್ಯಾಚರಣೆ ಹೇಗಿತ್ತು.. ಗೊತ್ತಾ..? ಮುಂದೆ ಓದಿ..


COMMERCIAL BREAK
SCROLL TO CONTINUE READING

ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಡೆಗೂ ಎನ್ಐಎ ಬಲೆಗೆ ಬಿದ್ದಿದ್ದಾನೆ. ಕಳೆದ ಎಂಟು ತಿಂಗಳಿಂದ ತಲೆಮರೆಸಿಕೊಂಡಿದ್ದ ಮಡಿಕೇರಿ ಮೂಲದ ಆರೋಪಿ ತೌಫೈಲ್, ಕಳೆದ ರಾತ್ರಿ ಬೆಂಗಳೂರಿನ ಅಮೃತಹಳ್ಳಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಸಂಚುಕೋರನಾಗಿದ್ದ ತೌಫೈಲ್ 2022 ಜುಲೈನಿಂದ ನಾಪತ್ತೆಯಾಗಿದ್ದ. ಅಂದಿನಿಂದ ಪೊಲೀಸರು ಮತ್ತು ಎನ್ಐಎ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ.


ಇದನ್ನೂ ಓದಿ:


ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ  ಎನ್ಐಎ ಅಧಿಕಾರಿಗಳು 12 ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಿದ್ರು. ಅದ್ರೆ ತೌಫೈಲ್ ಸೇರಿ ಇನ್ನೂ ನಾಲ್ವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ ಅವರ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಿ ಐದು ಲಕ್ಷ ಬಹುಮಾನ ಘೋಷಣೆ ಮಾಡಿದ್ದರು. ಅದ್ರೆ ಈವರೆಗೆ ಆರೋಪಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಅದ್ರೂ ಆರೋಪಿ ತೌಫೈಲ್ ಮೇಲೆ ನಿಗಾ ಇಟ್ಟಿದ್ದ ಎನ್ಐಎ ಅಧಿಕಾರಿಗಳು,ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. 


ನಿನ್ನೆ ರಾತ್ರಿ 9.30 ರ ಸಮಯದಲ್ಲಿ ಭುವನೇಶ್ವರಿನಗರದ, ಮಾರುತಿ ಲೇಔಟ್ ನ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ಲಂಬರ್, ಆಟೋ ಚಾಲಕರ ಸೋಗಿನಲ್ಲಿ ಎನ್ಐಎ ಅಧಿಕಾರಿಗಳು ತೌಫೈಲ್ ಮನೆಗೆ ಎಂಟ್ರಿ ಕೊಟ್ಟಿದ್ದು, ಈ ವೇಳೆ ಆರೋಪಿ ತೌಫಿಲ್ ಮಾಂಸ ಕಟ್ ಮಾಡ್ತಿದ್ದ. ಅಧಿಕಾರಿಗಳನ್ನ ಕಂಡ ತೌಫೈಲ್ ಮಚ್ಚಿನಿಂದ ಅಟ್ಯಾಕ್ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ, ನಂತರ ಬಂದ 10 ರಿಂದ 12 ಜನ ಅಧಿಕಾರಿಗಳು ಕೂಡಲೇ ಎನ್ಐಎ ಆತನನ್ನ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಇನ್ನೂ ಬಂಧಿತ ತೌಫೈಲ್ ಮೂರ್ನಾಲ್ಕು ತಿಂಗಳಿಂದ ಇಲ್ಲಿ ವಾಸವಾಗಿದ್ದು, ಯಾರ ಜೊತೆಗು ಅಷ್ಟಾಗಿ ಸಂಪರ್ಕ ಹೊಂದಿರಲಿಲ್ಲ ಎನ್ನಲಾಗಿದೆ.


ಇದನ್ನೂ ಓದಿ:


ಇನ್ನೂ ತೌಫೈಲ್ ವಾಸವಿದ್ದ ಮೂರಂತಸ್ತಿನ ಕಟ್ಟಡ ನಂಜುಂಡಪ್ಪ ಎಂಬುವರಿಗೆ ಸೇರಿದ್ದು, ಅದರಲ್ಲಿ ಮೊದಲನೇ ಮಹಡಿಯಲ್ಲಿ ವ್ಯಕ್ತಿಯೊಬ್ಬನಿಗೆ ಬಾಡಿಗೆ ನೀಡಲಾಗಿತ್ತು. ಆ ಬಾಡಿಗೆ ಮನೆಯಲ್ಲಿ ತೌಫೈಲ್ ವಾಸವಿದ್ದ ಎನ್ನಲಾಗಿದೆ. ಸದ್ಯ ಎನ್ಐಎ ಅಧಿಕಾರಿಗಳು ತೌಫೈಲ್ ನನ್ನ ತಮ್ಮ ವಶಕ್ಕೆ ಪಡೆದಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.