ಮಳೆಗಾಲಕ್ಕೆ ಮುನ್ನೆಚ್ಚರಿಕೆ ವಹಿಸಿ; ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಸೂಚನೆ
ರಸ್ತೆ ಗುಂಡಿ ಮುಚ್ಚುವುದು, ಒಳಚರಂಡಿ, ರಾಜಕಾಲುವೆಗಳಲ್ಲಿ ಪ್ರವಾಹ ಆಗದ ರೀತಿ, ತಗ್ಗು ಪ್ರದೇಶದಲ್ಲಿ ಪ್ರವಾಹ ಆಗದಂತೆ ಏನೆಲ್ಲಾ ಮುನ್ನಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ
ಬೆಂಗಳೂರು: ಸಂಭಾವ್ಯ ಮಳೆ ಅನಾಹುತದ ಬಗ್ಗೆ ತೆಗೆದುಕೊಂಡ ಹಾಗೂ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮದ ಕುರಿತು ಹಿರಿಯ ಅಧಿಕಾರಿಗಳ ಜೊತೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಸೋಮವಾರ ವಿಕಾಸಸೌಧದಲ್ಲಿ ಸಭೆ ನಡೆಸಿದರು.
ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆಗಮನವಾಗುತ್ತಿದ್ದು, ಮಳೆ ಎದುರಿಸಲು ನಗರ ಸಜ್ಜಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದರು. ರಸ್ತೆ ಗುಂಡಿ ಮುಚ್ಚುವುದು, ಒಳಚರಂಡಿ, ರಾಜಕಾಲುವೆಗಳಲ್ಲಿ ಪ್ರವಾಹ ಆಗದ ರೀತಿ, ತಗ್ಗು ಪ್ರದೇಶದಲ್ಲಿ ಪ್ರವಾಹ ಆಗದಂತೆ ಏನೆಲ್ಲಾ ಮುನ್ನಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಪ್ರಶ್ನಿಸಿದರು.
ಮಳೆಗಾಲದಲ್ಲಿ ಉಂಟಾಗುವ ರಸ್ತೆ ಗುಂಡಿ ಮುಚ್ಚಲು ಪ್ರೀಮಿಕ್ಸ್‌ನನ್ನು ತಮಿಳುನಾಡಿನಿಂದ ತರಿಸಲಾಗಿದ್ದು, ಇದರಿಂದ ಮುಚ್ಚುವ ಗುಂಡಿ ಕನಿಷ್ಠ ಒಂದು ವರ್ಷಗಳ ಕಾಲ ಬಾಳಿಕೆ ಬರಲಿದೆ. ಮಳೆ ಸಂದರ್ಭದಲ್ಲಿಯೂ ಈ ಪ್ರೀ ಮಿಕ್ಸ್ ಹಾಕಲು ಯೋಗ್ಯವಾಗಿದೆ. ರಾಜಕಾಲುವೆಯಲ್ಲಿ ಹೂಳು ತೆಗೆಯುವ ಕೆಲಸ ಬಹುತೇಕ ಪೂರ್ಣವಾಗಿದೆ. ಜೊತೆಗೆ ಈ ಭಾಗದಲ್ಲಿ ಪ್ರವಾಹವಾಗದಂತೆ ತಡೆಯಲು ಸೆನ್ಸಾರ್ ಅಳವಡಿಸುವುದು, ತಡೆಗೋಡೆ ನಿರ್ಮಾಣ ಕೆಲಸ ಕೂಡ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರಾಜಕಾಲುವೆಗಳಿಗೆ ಕಸ ಹಾಕುವವರ ಮೇಲೆ ಎಫ್‌ಐಆರ್ ದಾಖಲಿಸಿರುವ ಬಗ್ಗೆಯೂ ಮಾಹಿತಿ ನೀಡಿದರು. ಇಂಥ ಕ್ರಮ ಹೆಚ್ಚು ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡಿದರು.
ಕೆಲ ರಸ್ತೆಗಳಲ್ಲಿ ಕಸದಿಂದ ಬ್ಲಾಕೇಜ್ ಆಗಿ, ರಸ್ತೆಯಲ್ಲೇ ನೀರು ನಿಲ್ಲುವ ಸ್ಥಿತಿ ಇದ್ದು, ಈ ಬಗ್ಗೆ ಎಚ್ಚರ ವಹಿಸಿ, ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸೂಚಿಸಿದರು. ಆಗಾಗ್ಗೇ ರಸ್ತೆಗಳ ನಿರ್ವಹಣೆ, ನೀರು ನಿಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಬೇಕು ಎಂದು ಇದೇ ವೇಳೆ ನಿರ್ದೇಶನ ನೀಡಿದರು.
ಬಿಬಿಎಂಪಿ ಸಹಾಯವಾಣಿ ಹಾಗೂ ಸಾಮಾಜಿಕ ಜಾಲತಾಣ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕ್ಕೆ ಸೂಚಿಸಿದರು.
ಮಾನ್ಸೂನ್ ಮಳೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಸ್ಕಾಂ ಬಹುತೇಕ ಹಳೇ ಲೈನ್‌ಗಳನ್ನು ಬದಲಿಸಲಾಗಿದೆ. ಜೊತೆಗೆ ಪವರ್ ಎಕ್ಸ್‌ಟೆನ್ಷನ್ ಬಳಿ ಮನೆ ನಿರ್ಮಿಸದಂತೆಯೂ ಕ್ರಮಕ್ಕೆ ಸೂಚಿಸಿದರು. ಈಗಾಗಲೇ ನಿರ್ಮಿಸಿರುವ ಎಕ್ಸ್‌ಟೆನ್ಷನ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ತೆರವು ಕೆಲಸ ಆಗಬೇಕಿದೆ. ಇದರಿಂದ ಜನರು ಸಹ ಎಚ್ಚೆತ್ತುಕೊಂಡು ಅನಧಿಕೃತವಾಗಿ ಮನೆ ನಿರ್ಮಿಸುವುದು ಕಡಿಮೆಯಾಗಲಿದೆ ಎಂದರು.
ಕಳೆದೆರಡು ದಿನಗಳಿಂದ ಮಳೆಯಾಗುತ್ತಿರುವುದರಿಂದ 34 ಸಾವಿರ ಕರೆಗಳು ಬೆಸ್ಕಾಂ ಸಹಾಯವಾಣಿಗೆ ಬಂದಿದ್ದು, ಬಹುತೇಕ ದೂರುಗಳನ್ನು ಪರಿಹರಿಸಲಾಗಿದೆ. ಪ್ರಸ್ತುತ 45 ಸಹಾಯವಾಣಿ ಕೇಂದ್ರ ಕೆಲಸ ನಿರ್ವಹಿಸುತ್ತಿದ್ದು, 20 ಹೆಚ್ಚುವರಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿದ್ಯುತ್ ತಂತಿಗಳನ್ನು ಮುಟ್ಟದ ರೀತಿಯಲ್ಲಿ ಜಾಗೃತಿ ಮೂಡಿಸುವ ಸಂಬಂಧ ಯೋಜನೆ ಹಾಕಿಕೊಂಡಿದ್ದು, ವಿದ್ಯುತ್ ಬಿಲ್ ಜೊತೆ ಬಿತ್ತಿಪತ್ರವನ್ನು ಸಹ ಹಂಚಲಾಗುತ್ತಿದೆ. ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ಪ್ರಬಂಧ, ಚಿತ್ರಕಲೆ ಮೂಲಕ ಸ್ಪರ್ಧೆ ಏರ್ಪಡಿಸಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದ್ದು ಈ ಬಗ್ಗೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು, ನೆಲಕ್ಕುರುಳಿದ ಮರಗಳ ತೆರವು, ವಿದ್ಯುತ್ ತಂತಿ ಬದಲು ಕೆಲಸ ಶೀಘ್ರ ಆಗಬೇಕು. ಜೊತೆಗೆ ಸಾರ್ವಜನಿಕರ ದೂರಿಗೆ ಸಹಾಯವಾಣಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಪ್ರಸ್ತುತ ಮಳೆಯಿಂದ ಆದ ಅನಾಹುತದ ಮಾಹಿತಿ ಪಡೆದುಕೊಂಡರು. ವಿಜಯನಗರ, ಮಲ್ಲೇಶ್ವರ ಸೇರಿದಂತೆ ಹಲವೆಡೆ ಮರಗಳು ನೆಲಕ್ಕುರುಳಿದ್ದು, ಅದರ ತೆರವಿಗನ ಕೆಲಸ ಶೀಘ್ರ ಆಗುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
8 ವಲಯ ಜಂಟಿ ಆಯುಕ್ತರು ಮಳೆಗಾಲದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಎಲ್ಲಿಯೂ ಮಳೆ ನೀರ ನಿಲ್ಲುವುದು, ರಸ್ತೆಗುಂಡಿ, ಪ್ರವಾಹ, ಕಸದ ಸಮಸ್ಯೆ ಎದುರಾದರೆ ಇದಕ್ಕೆ ನಿಮ್ಮನ್ನೆ ಹೊಣೆ ಮಾಡಲಾಗುವುದು. ಮಳೆಗಾಲವನ್ನು ಸಮರ್ಪಕವಾಗಿ ನಿಭಾಯಿಸಲು ನೇಮಿಸಿರುವ ತಂಡಗಳು ಸೂಕ್ತರೀತಿ ಕೆಲಸ ಮಾಡುವಂತೆಯೂ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದರು.