ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾನುವಾರ(ಇಂದು) ರಾತ್ರಿ ಮೈಸೂರಿಗೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಸಂಚರಿಸುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರ ರಾತ್ರಿ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರ‍್ಯಾಡಿಸನ್‌ ಬ್ಲೂ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. 


ಈ ಹಿನ್ನೆಲೆಯಲ್ಲಿ ಮೋದಿಗೆ ಭಾರ್ಜರಿ ಸ್ವಾಗತ ನೀಡಲು ಬಿಜೆಪಿ ಭರದ ತಯಾರಿ ನಡೆಸಿದ್ದು, ರಾತ್ರಿ ಪ್ರಧಾನಿ ಸಂಚರಿಸುವ ರಸ್ತೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ನಿಲ್ಲಿಸಿ ಬಿಜೆಪಿ ಬಾವುಟ ತೋರಿಸಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದೆ.  


ಸೋಮವಾರ ಬೆಳಗ್ಗೆ ಹೊಟೇಲ್‌ನಲ್ಲಿಯೇ ವಿಡಿಯೋ ಕಾನ್ಫರೆನ್ಸ್‌ ನಡೆಸಿ ನಂತರ ಹೆಲಿಪ್ಯಾಡ್‌ ಮೂಲಕ ಅಲ್ಲಿಂದ ಶ್ರವಣ ಬೆಳಗೊಳಕ್ಕೆ ತೆರಳಿ ಮಹಾಮಸ್ತಕಾಭಿಶೇಕದಲ್ಲಿ ಪಾಲ್ಗೊಂಡು, ಬಳಿಕ  ಮೈಸೂರಿಗೆ ವಾಪಾಸ್ಸಾಗಿ ನಂತರ ರೈಲ್ವೆ ನಿಲ್ದಾಣಕ್ಕೆ ತೆರಳಿ ಬೆಂಗಳೂರು-ಮೈಸೂರು ರೈಲುಮಾರ್ಗದ ಪೂರ್ಣಗೊಂಡಿರುವ ವಿದ್ಯುದೀಕರಣ ಕಾಮಗಾರಿಯ ಲೋಕಾರ್ಪಣೆ ಹಾಗೂ ಮೈಸೂರು- ಉದಯ್‌ಪುರ ರೈಲು ಮಾರ್ಗದ ಪ್ಯಾಲೇಸ್‌ ಕ್ವೀನ್‌ ಹಮ್ಸಫರ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಲಿದ್ದಾರೆ. 


ನಂತರ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ, ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.