ಪ್ರಾಮಾಣಿಕರಿಗೆ ಮೋದಿ ಇಷ್ಟವಾಗಿದ್ದಾರೆ, ಆದರೆ ಭ್ರಷ್ಟರಿಗೆ ಮೋದಿ ಅಂದ್ರೆ ಕಷ್ಟ: ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ
ರಾಜ್ಯದ ಮುಖ್ಯಮಂತ್ರಿ ಜನರನ್ನು ಹಾದಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಾತು ಮಾತಿಗೂ ಕಣ್ಣೀರು ಹಾಕುವ ಇಂಥಾ ಮುಖ್ಯಮಂತ್ರಿ ಮತ್ತು ಇಂಥಾ ಸರ್ಕಾರ ಎಲ್ಲಿಯೂ ಇಲ್ಲ ಎಂದು ಮೋದಿ ಟೀಕಿಸಿದರು.
ಹುಬ್ಬಳ್ಳಿ: ದೇಶದಲಿ ಯಾರು ಪ್ರಾಮಾಣಿಕರೋ ಅವರಿಗೆ ಮೋದಿ ಇಷ್ಟವಾಗುತ್ತಾರೆ. ಅವರಿಗೆ ಮೋದಿ ಎಂದರೆ ನಂಬಿಕೆ ಇದೆ. ಆದರೆ ಯಾರು ಭ್ರಷ್ಟರೋ ಅವರಿಗೆ ಮೋದಿ ಅಂದರೆ ಕಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಗೆ ಇಂದು ಹುಬ್ಬಳ್ಳಿಯ ಕೆಎಲ್ಇ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ರಣಕಹಳೆ ಊದಿದ ಪ್ರಧಾನಿ ಮೋದಿ, ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು ಎರಡೂ ರಾಜಕೀಯ ಪಕ್ಷಗಳೂ ಕಿತ್ತಾಡಿಕೊಳ್ಳುತ್ತಿವೆ. ಶಾಸಕರು ರೆಸಾರ್ಟ್ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ರಾಜ್ಯದ ಸಿಎಂ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಕೇವಲ 60 ಸಾವಿರ ರೈತರ ಸಾಲಮನ್ನಾ ಮಾತ್ರ. ಇದರಲ್ಲೇ ಗೊತ್ತಾಗುತ್ತೆ ರಾಜ್ಯ ಸರ್ಕಾರದ ಯೋಗ್ಯತೆಯೇನು ಎಂಬುದು ಎಂದು ಮೋದಿ ಕಿಡಿ ಕಾರಿದರು.
ಇನ್ನು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಇಲ್ಲಿನ ಮುಖ್ಯಮಂತ್ರಿ ಮಜಬೂರಿ ಮುಖ್ಯಮಂತ್ರಿ. ಜನರನ್ನು ಹಾದಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಾತು ಮಾತಿಗೂ ಕಣ್ಣೀರು ಹಾಕುವ ಇಂಥಾ ಮುಖ್ಯಮಂತ್ರಿ ಮತ್ತು ಇಂಥಾ ಸರ್ಕಾರ ಎಲ್ಲಿಯೂ ಇಲ್ಲ. ಈ ಸರ್ಕಾರ ಅಧಿಕಾರದಲ್ಲಿದ್ದು ಏನೂ ಪ್ರಯೋಜನವಿಲ್ಲ. ಹಾಗಾಗಿ ಈಗಾಗಲೇ ಹಲವು ಭರವಸೆಗಳನ್ನು ಈಡೇರಿಸಿರುವ, ನವ ಭಾರತದ ಕನಸುಗಳನ್ನು ಸಾಕಾರಗೊಳಿಸಲು ಹೊರಟಿರುವ ನಮ್ಮ ಸರಕಾರ(ಬಿಜೆಪಿ)ಕ್ಕೆ ಜನತೆ ಮತ ಹಾಕಿ. ಒಳ್ಳೇದು ಬೇಕೋ? ಕೆಟ್ಟದ್ದು ಬೇಕೋ? ನಿಮ್ಮ ಸರ್ಕಾರವನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ಮೋದಿ ಹೇಳಿದರು.
ಇದಕ್ಕೂ ಮುನ್ನ ಭಾಷಣದ ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಈ ಭೂಮಿ, ತ್ಯಾಗ, ಸಾಹಸ, ಶೌರ್ಯ, ಇತಿಹಾಸ, ಸಂಸ್ಕೃತಿಗೆ ಹೆಸರು. ನನಗೆ ಈ ಪುಣ್ಯ, ಪವಿತ್ರ ಭೂಮಿಗೆ ಬಂದಿದ್ದಕ್ಕೆ ರೋಮಾಂಚನವಾಗಿದೆ" ಎಂದು ನುಡಿದರು. ಅಲ್ಲದೆ, ಕಿತ್ತೂರು ರಾಣಿ ಚೆನ್ನಮ್ಮ, ಭಕ್ತ ಕವಿ ಕನಕದಾಸ, ಸಂಗೊಳ್ಳಿ ರಾಯಣ್ಣ, ದ.ರಾ. ಬೇಂದ್ರ, ಗಂಗೂಭಾಯಿ ಹಾನಗಲ್, ಪಂಡಿತ್ ಭೀಮಸೇನ ಜೋಷಿ ಅವರಂಥ ಮಹಾನ್ ವ್ಯಕ್ತಿಗಳನ್ನು ನೀಡಿದ ಹುಬ್ಬಳ್ಳಿ-ಧಾರವಾಡ ನಿಜಕ್ಕೂ ಪುಣ್ಯ ಭೂಮಿಯಾದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಬಿಜೆಪಿ ನಾಯಕ ಅನಂತ್ ಕುಮಾರ್ ಅವರ ಸಾಮಾಜಿಕ ಕಾರ್ಯಗಳನ್ನು ಮೋದಿ ಸ್ಮರಿಸಿದರು. ಮುಂದುವರೆದು ಮಾತನಾಡುತ್ತಾ ತಮ್ಮ ನೇತೃತ್ವದ ಎನ್ಡಿಎ ಸರ್ಕಾರದ ಸಾಧನೆಗಳನ್ನು ವಿವರಿಸಿದ ಮೋದಿ, ಕಳೆದ 50 ವರ್ಷಗಳಿಂದ ಇತರ ಸರ್ಕಾರಗಳಿಂದ ಆಗದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಮಾಡಿದೆ. ಹಾಗಾಗಿ, ಜನತೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಾಮಾಣಿಕ, ಪಾರದರ್ಶಕ, ಸ್ಪಷ್ಟತೆ, ಜನಾನುರಾಗಿ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.