ಕೊಡಗು ಪ್ರವಾಹ: ನಾನ್ ವೆಜ್ ಊಟ ತ್ಯಜಿಸಿ ಖೈದಿಗಳಿಂದ ಸಂತ್ರಸ್ತರಿಗೆ ನೆರವು
ಬಳ್ಳಾರಿ ಕಾರಾಗೃಹದ ಖೈದಿಗಳು ಮಾಂಸಾಹಾರ ತ್ಯಜಿಸಿ ಅದರಿಂದ ಸಂಗ್ರಹವಾದ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ಬಳ್ಳಾರಿ: ಭೀಕರ ಪ್ರವಾಹದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಗೆ ರಾಜ್ಯದ ಹಲವು ಸಂಘಟನೆಗಳು ನೆರವಿನ ಮಹಾಪೂರವನ್ನೇ ಹರಿಸುತ್ತಿವೆ. ಈ ಬೆನ್ನಲ್ಲೇ ಬಳ್ಳಾರಿ ಕಾರಾಗೃಹದ ಖೈದಿಗಳು ವಿಭಿನ್ನ ರೀತಿಯಲ್ಲಿ ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ಕಾರಾಗೃಹದಲ್ಲಿ ಖೈದಿಗಳಿಗೆ ವಾರಕ್ಕೆ ಎರಡು ದಿನ, ಅಂದರೆ ಶನಿವಾರ ಮತ್ತು ಭಾನುವಾರ ಮಾಂಸಾಹಾರ ಊಟ ನೀಡಲಾಗುತ್ತದೆ. ಆದರೆ ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜನತೆಗೆ ತಾವೂ ತಮ್ಮ ಕೈಲಾದಷ್ಟು ನೆರವು ನೀಡಬೇಕೆಂದು ನಿರ್ಧರಿಸಿರುವ ಖೈದಿಗಳು, "ನಮಗೆ ಒಂದು ತಿಂಗಳು ನಾನ್ ವೆಜ್ ಊಟ ಬೇಡ, ಆ ಹಣವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ಕೊಡಿ'' ಎಂದಿದ್ದಾರೆ.
ಕಾರಾಗೃಹದಲ್ಲಿ ನಾಲ್ಕು ವಾರಗಳ ಕಾಲ ಮಾಂಸಾಹಾರ ತ್ಯಜಿಸಿದರೆ ಕನಿಷ್ಠ 2 ರಿಂದ 3 ಲಕ್ಷ ರೂಪಾಯಿ ಸಂಗ್ರಹವಾಗುತ್ತದೆ. ಹಾಗಾಗಿ ಆ ಹಣವನ್ನು ಪ್ರವಾಹ ಪರಿಹಾರ ನಿಧಿಗೆ ನೀಡಲು ಖಿದಿಗಳು ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹಾಗಾಗಿ ಈ ಮನವಿಗೆ ಜೈಲು ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಸ್ಪಂದಿಸಿದ್ದಾರೆ ಎನ್ನಲಾಗಿದೆ.