ನವದೆಹಲಿ: ವಿಶ್ವವಿದ್ಯಾನಿಲಯಗಳ ಹಣಕಾಸು ಆಯೋಗವು (ಯುಜಿಸಿ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದು ಮಾಡಿದ ಕ್ರಮವನ್ನು ಖಂಡಿಸಿ ನವದೆಹಲಿಯ ಯುಜಿಸಿ ಕಚೇರಿ ಮುಂದೆ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಂ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರವಾನಿಗೆ ನವೀಕರಣ ಮಾಡಬೇಕು. ಕರ್ನಾಟಕ ಸರ್ಕಾರ ಹಾಗೂ ಕೆ ಎಸ್ ಓ ಯು ಈಗಾಗಲೇ‌ ಸುಮಾರು 10 ಸಾವಿರ ಪುಟಗಳ ದಾಖಲೆಯನ್ನು ವಿಶ್ವವಿದ್ಯಾನಿಲಯಗಳ ಹಣಕಾಸು ಆಯೋಗಕ್ಕೆ ನೀಡಿದೆ. 


ತಾಂತ್ರಿಕ ವಿಷಯಗಳ ತರಗತಿಗಳನ್ನು ಮುಂದಿನ‌ ದಿನಗಳಲ್ಲಿ ನಡೆಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಲಾಗಿದೆ. ಆದರೂ ವಿವಿಯ ಮಾನ್ಯತೆ ರದ್ದು ಮಾಡಲಾಗಿದೆ. ಇದರಿಂದ 6 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಮುಸುಕಾಗಿದೆ. ಕೆಲವರು ನೌಕರಿ ಕಳೆದುಕೊಂಡಿದ್ದಾರೆ. ಕೆಲವರ ಉನ್ನತ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ಎಲ್ಲಾ ಅಂಶಗಳನ್ನು ಮನಗೊಂಡು ಮತ್ತೆ ಮಾನ್ಯತೆ ನೀಡಬೇಕೆಂದು ಕೆ.ಎಸ್. ಶಿವರಾಂ ಮನವಿ ಮಾಡಿದರು.


ಯುಜಿಸಿ ಮಾತ್ರವಲ್ಲದೆ ಪ್ರಧಾನಿ ಕಚೇರಿಗೂ ಮನವಿ ಮಾಡುವುದಾಗಿ ತಿಳಿಸಿದ ಶಿವರಾಂ, ಕೂಡಲೇ ಮಾನ್ಯತೆ ನವೀಕರಣ ಮಾಡದಿದ್ದಲ್ಲಿ ಮುಂದಿನ‌ ತಿಂಗಳು ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ದೆಹಲಿ ಚಲೋ ನಡೆಸಲಾಗುವುದು ಎಂದು ಕೆ.ಎಸ್. ಶಿವರಾಂ ಎಚ್ಚರಿಕೆ ನೀಡಿದ್ದಾರೆ.