ಬೆಂಗಳೂರು: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಅಪ್ಪಳಿಸಿ ಜನ ಪರಿತಪಿಸುತ್ತಿರುವಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌನವೃತ ಆಚರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

'ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ' ಎಂಬ ಮಾತೊಂದಿತ್ತು. ಯಡಿಯೂರಪ್ಪ ಹೆಸರಿನ ಹಿಂದೆ 'ಹೋರಾಟಗಾರ' ಎಂಬ ವಿಶೇಷಣವನ್ನು ಸೇರಿಸಲಾಗುತ್ತಿತ್ತು. ಬಲ್ಲವರು, ಬಗಿಲಲ್ಲಿರುವವರು 'ಛಲದಂಕ ಮಲ್ಲ' ಎಂಬ ಬಿರುದನ್ನು ನೀಡಿದ್ದರು.


ಆದರೆ ಸರ್ಕಾರ ನಡೆಸುತ್ತಿರುವ ಈ ನೇತಾರ ರಾಜ್ಯದ ಜನ‌ ಪ್ರವಾಹಕ್ಕೆ ಸಿಲುಕಿ ನಲುಗಿಹೋಗುತ್ತಿರುವಾಗ ಕೇಂದ್ರ ಸರ್ಕಾರದಿಂದ ದುಡ್ಡು ತಂದು 'ಅಷ್ಟೋ‌ ಇಷ್ಟೋ ಬದುಕು ಕಟ್ಟಿಕೊಳ್ಳಲು' ನೆರವಾಗಲು ಗುಡುಗುತ್ತಿಲ್ಲ. ಹುಟ್ಟು ಹೋರಾಟಗಾರನಾದರೂ ಹಕ್ಕೆಂಬ ಕತ್ತಿಯನ್ನು ಎತ್ತುತ್ತಿಲ್ಲ. ಕೇಂದ್ರ ಸರ್ಕಾರದಿಂದ ಹಣ ಪಡೆದೇ ತೀರುವೆ ಎಂಬ ಹಠವನ್ನೂ ಪ್ರದರ್ಶಿಸುತ್ತಿಲ್ಲ.


ಯಡಿಯೂರಪ್ಪ ಈಗಾಗಲೇ ಒಮ್ಮೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪ್ರವಾಹ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಭೇಟಿ ಮಾಡಲು ಪ್ರಯತ್ನಿಸಿ ಸೋತಿದ್ದಾರೆ. ಕಳೆದ ವಾರ ದೆಹಲಿ ಪ್ರವಾಸ ನಿಗದಿ ಮಾಡಿ ರದ್ದುಗೊಳಿಸಿದ್ದಾರೆ. ಬೆಂಬಲಿಗರನ್ನು ದೆಹಲಿಗೆ ಕಳುಹಿಸಿ ಕೇಂದ್ರ ನಾಯಕರ ಮನವೊಲಿಸುವ ಹುಸಿ ಪ್ರಯತ್ನವನ್ನೂ ಮಾಡಿದ್ದಾರೆ. ಇಷ್ಟಾದರೂ ಯಡಿಯೂರಪ್ಪ ಅವರಿಗೆ  ಮೋದಿ ಮತ್ತು ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿಲ್ಲ.


ಇವತ್ತು ಮತ್ತೆ ಯಡಿಯೂರಪ್ಪ ದೆಹಲಿಗೆ ಹೋಗುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಈ ಸುದ್ದಿ ಬಗ್ಗೆ ಸ್ವತಃ ಯಡಿಯೂರಪ್ಪ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. 'ತಾವು ದೆಹಲಿಗೆ ಹೋಗುತ್ತಿಲ್ಲ' ಎಂದು ಹೇಳಿದ್ದಾರೆ. ಹಾಗಾದರೆ ದೆಹಲಿಗೆ ಹೋಗಿ ಪ್ರವಾಹ ಪರಿಹಾರದ ದುಡ್ಡು ತರುವುದು ಯಾವಾಗ ಯಡಿಯೂರಪ್ಪ ಅವರೇ?