ಬೆಂಗಳೂರು : ರಾಜ್ಯದ ಜನರಿಗೆ 40 ಪರ್ಸೆಂಟ್‌ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಪರ್ಸೆಂಟ್‌ ಭ್ರಷ್ಟರಾಗಿದ್ದಾರೆ. ಕಳೆದ 18 ತಿಂಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಿನನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.


COMMERCIAL BREAK
SCROLL TO CONTINUE READING

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರು ತಮ್ಮ 40 ವರ್ಷದ ಜೀವನ ತೆರೆದ ಪುಸ್ತಕ ಅಂದವರು. ಇವತ್ತು ಅವರ ತೆರೆದ ಪುಸ್ತಕ ಪುಟಗಳು ತಿರುವಿದರೆ ಲೂಟಿಯ ಕಪ್ಪು ಚುಕ್ಕೆಗಳೇ ಕಾಣುತ್ತಿವೆ. ಸಿದ್ದರಾಮಯ್ಯ ನೇಮಕ ಮಾಡಿರುವ ಪೊಲೀಸ್ ಅಧಿಕಾರಿಯಿಂದ ವಿಚಾರಣೆ ಎದುರಿಸುತ್ತಿರುವುದು ಕನ್ನಡಿಗರ ದುರ್ದೈವ. ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ಭ್ರಷ್ಟಾಚಾರದ ಬಗ್ಗೆ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ವೇಳೆ ಪ್ರದಾನ ಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಇದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. 


ಅದು ಪ್ರಧಾನಿ ಮೋದಿ ಅವರು ಮಾಡಿರುವ ಆರೋಪವಲ್ಲ. ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ. ಮದ್ಯ ಮಾರಾಟಗಾರರ ಸಂಘ ಬರೆದಿರುವ ಪತ್ರವನ್ನ ಒಮ್ಮೆ ಮುಖ್ಯಮಂತ್ರಿಗಳು ತರಿಸಿಕೊಂಡು ಓದಬೇಕು. ಲೈಸೆನ್ಸ್ ನವೀಕರಣಕ್ಕೆ ರೇಟೇಷ್ಟು, ಮಂಥ್ಲಿ ಮನಿ ಹೆಸರಿನಲ್ಲಿ ಪ್ರತಿ ಮದ್ಯದ ಅಂಗಡಿಯಿಂದ ಎಷ್ಟು ವಸೂಲಿ ಆಗುತ್ತಿದೆ, ಅಬಕಾರಿ ಇಲಾಖೆಯ ಟ್ರಾನ್ಸಫರ್ ದಂಧೆಯಲ್ಲಿ ಯಾವ ಮಟ್ಟದ ಅಧಿಕಾರಿಗೆ ಎಷ್ಟು ಲಂಚ ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎಂದರು. 


ಇದನ್ನೂ ಓದಿ: ಕನ್ನಡ ಆಯ್ತು.. ಈಗ ಹಿಂದಿ ಬಿಗ್‌ಬಾಸ್‌ಗೆ ಕರುನಾಡ ಕ್ರಶ್‌ ಎಂಟ್ರಿ..! ಎಲ್ಲೆಲ್ಲೂ ಜಗ್ಗಣ್ಣನದ್ದೇ ಹವಾ..?!  


ಅದನ್ನ ಮಾಧ್ಯಮಗಳು ವರದಿ ಮಾಡಿವೆ. ಇದನ್ನೇ ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದಲ್ಲಿ ಹೇಳಿದ್ದಾರೆಯೇ ಹೊರತು ಅವರು ಯಾವುದೇ ಸುಳ್ಳು ಆರೋಪ ಮಾಡಿಲ್ಲ. ಸಾಕ್ಷಿ ಬೇಕಾದರೆ ಸಿದ್ದರಾಮಯ್ಯನವರು ಮದ್ಯ ಮಾರಾಟಗಾರರ ಸಂಘದ ಆರೋಪದ ತನಿಖೆ ಮಾಡಲು ಮತ್ತೊಂದು ಎಸ್ ಐಟಿ ರಚಿಸಲಿ. ಮದ್ಯ ಮಾರಾಟಗಾರರು ಮಾಡುತ್ತಿರುವ ಆರೋಪ ಸುಳ್ಳಾದರೆ ಅವರ ಲೈಸೆನ್ಸ್ ರದ್ದು ಮಾಡಿ ಅಂಗಡಿಗಳಿಗೆ ಬೀಗ ಹಾಕಿಸಿ. ತಮ್ಮ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನ ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ.


ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40% ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾ ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ. 40 ಪರ್ಸೆಂಟ್ ಕಮಿಷನ್ ಆರೋಪ ಕಾಂಗ್ರೆಸ್ ನ ಟೂಲ್ ಕಿಟ್ ಎಂಬುದು ಈಗ ಸಾಕ್ಷಿ ಸಮೇತ ಋಜುವಾತಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಅಂಬಿಕಾಪತಿ ಗುತ್ತಿಗೆ ಕೆಲಸಗಳನ್ನು ಮಾಡುವುದನ್ನು ಬಿಟ್ಟೆ 6 ವರ್ಷವಾಗಿತ್ತು. ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಕಟ್ಟಿದ ಸುಳ್ಳಿನ ಮಹಲು ಸಂಪೂರ್ಣ ಕುಸಿದುಬಿದ್ದಿದೆ.


ಬೆಂಗಳೂರು ನಗರದಲ್ಲಿ ಒಂದು ರಸ್ತೆ ಗುಂಡಿ ಮುಚ್ಚಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಭಗವಾನ್ ಬುದ್ಧ ಸಾವೇ ಇಲ್ಲದ ಮನೆಯಿಂದ ಸಾಸಿವೆ ತನ್ನಿ ಎಂದಿದ್ದರು. ಹಾಗೆ ಬೆಂಗಳೂರಿನಲ್ಲಿ ಇವತ್ತು ರಸ್ತೆ ಗುಂಡಿ ಇಲ್ಲದ ರಸ್ತೆ ತೋರಿಸಿ ಎನ್ನಬೇಕಾದ ಪರಿಸ್ಥಿತಿ ಬಂದಿದೆ. ತ್ಯಾಜ್ಯ ವಿಲೇವಾರಿ ಮಾಡಲು ಸರ್ಕಾರದ ಬಳಿ ದುಡ್ಡಿಲ್ಲ. ಹಾಲು, ಕರೆಂಟು, ಪೆಟ್ರೋಲ್, ಡೀಸೆಲ್, ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ ಎಲ್ಲವನ್ನ ಜಾಸ್ತಿ ಮಾಡಿದ್ದಾಯ್ತು, ಈಗ ಕಸ ವಿಲೇವಾರಿ ಹೆಸರಿನಲ್ಲಿ ಹೊಸ ಸೆಸ್ ಹಾಕಿ ಬೆಂಗಳೂರಿನ ಜನರನ್ನ ಸುಲಿಗೆ ಮಾಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸುತ್ತಿದೆ.


ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರಕಾರ ಅನುದಾನ ಬೇಕಾದರೆ ಶಾಸಕರು ತಗ್ಗಿ ಬಗ್ಗಿ ನಡೆಯಬೇಕಂತೆ. ಬೆಂಗಳೂರಿನ ಜನತೆಗೆ, ಜಯನಗರದ ಜನತೆಗೆ 'ನಮ್ಮ ತೆರಿಗೆ ನಮ್ಮ ಹಕ್ಕು' ಅನ್ವಯಿಸುವುದಿಲ್ಲವಾ? ಡಿಸಿಎಂ ಡಿಕೆ ಶಿವಕುಮಾರ್ ಅವರು ಪಾಳೇಗಾರರೂ ಅಲ್ಲ, ನಿಜಾಮರ ಕಾಲದ ರಜಾಕರು ಅಲ್ಲ.


ಇದನ್ನೂ ಓದಿ: ಬಿಜೆಪಿಗೆ ಗ್ಯಾರಂಟಿ ಯೋಜನೆಗಳ ಮಹತ್ವ ಗೊತ್ತಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್


ವಕ್ಫ್ ಹೆಸರಿನಲ್ಲಿ ರೈತರ ಜಮೀನಿನ ಮೇಲೆ, ಸರ್ಕಾರಿ ಆಸ್ತಿ ಪಾಸ್ತಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಮಿತಿಮೀರುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಉಳುಮೆ ಮಾಡಲು ಬಂದಿದ್ದ ರೈತರ ಮೇಲೆ ಮತಾಂಧರು ಹಲ್ಲೆ ಮಾಡಿ, ಬೇಲಿ ಕಿತ್ತು ಹಾಕಿದ್ದಾರೆ. ಸಿದ್ದರಾಮಯ್ಯನವರು ಈಗ ಅಹಿಂದ ಚಾಂಪಿಯನ್ ಅಲ್ಲ, ಮುಸ್ಲಿಮರ ಚಾಂಪಿಯನ್. ವಕ್ಫ್ ಹೆಸರಿನಲ್ಲಿ ಲೂಟಿ ಆಗುತ್ತಿರುವುದು ಬಹುತೇಕ ದಲಿತರು, ಹಿಂದುಳಿದ ಸಮುದಾಯಗಳಿಗೆ ಸೇರಿದ ಭೂಮಿಯೇ. ಮಂಗಳವಾರ ನಾನು ಚಿಕ್ಕಬಳ್ಳಾಪುರಕ್ಕೆ ಹೋಗಿ ರೈತರನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದರು.


ಇದು ಗುರುವಾರದ ಸರ್ಕಾರ. ಕೆಲವ ಸಂಪುಟ ಸಭೆಯ ದಿನದಂದು ಸರ್ಕಾರ ಜೀವಂತವಾಗಿರುತ್ತದೆ. ಆಮೇಲೆ ಯಾವ ಸಚಿವರೂ ಪತ್ತೆ ಇರಲ್ಲ. ಈ ಮೊದಲು ರಾಜಸ್ವ ಸಂಗ್ರಹಣೆಗೆ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿತ್ತು. ಈಗ ಭ್ರಷ್ಟಾಚಾರ, ಲಂಚಕ್ಕೆ ಟಾರ್ಗೆಟ್ ನೀಡಲಾಗುತ್ತಿದೆ ಎಂದು ಹೇಳಿದರು.


ಗ್ಯಾರೆಂಟಿಗಳನ್ನು ನಿಲ್ಲಿಸುವುದು ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರೆಂಟಿ. ಪ್ರತಿ ವರ್ಷ 10% ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ. ಒಟ್ಟಿನಲ್ಲಿ ಗ್ಯಾರೆಂಟಿಗಳು ರದ್ದು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿ ಇದೆ. ಈ ವರ್ಷ ಸಾಲ ಎತ್ತುವಳಿ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದರು.


ಸಿಎಂ ಸಿದ್ದರಾಮಯ್ಯ ಅವರು ತಮಗೆ ಸಂಕಷ್ಟ ಎದುರಾದಾಗ ನಾನು ಹಳ್ಳಿಯವನು, ಹಿಂದುಳಿದ ಸಮುದಾಯದವನು ಎಂದು ಜಾತಿ ಅಸ್ತ್ರ ಬಳಸುವುದನ್ನು 40 ವರ್ಷದಿಂದ ರಾಜ್ಯದ ಜನತೆ ನೋಡಿಕೊಂಡೇ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಪಾಪದ ತುಂಬಿದೆ. ಜನ ಕಾಂಗ್ರೆಸ್ ಪಕ್ಷವನ್ನ ಗಂಟು ಮೂಟೆ ಕಟ್ಟಿಸಿ ಶಾಶ್ವತವಾಗಿ ಮನೆಗೆ ಕಳುಹಿಸೋದು ಗ್ಯಾರಂಟಿ ಎಂದು ಹೇಳಿದರು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.