ಬೆಂಗಳೂರು : ಗ್ಯಾರಂಟಿಗಳಿಂದ ಪಾಪರ್‌ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಬಿಡಿಎ ಆಸ್ತಿಗಳನ್ನು ಮಾರಾಟ ಮಾಡಿ ವರಿಷ್ಠರಿಗೆ ಕಪ್ಪ ನೀಡಲು ಮುಂದಾಗಿದೆ. ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವುದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಪಾಪರ್‌ ಆಗಿ ದಿವಾಳಿಯ ಪರಮಾವಧಿಗೆ ತಲುಪಿದೆ. ಕೇರಳ ಸರ್ಕಾರ ದಿವಾಳಿಯಾಗಿ ಸಾಲವೂ ಸಿಗುತ್ತಿಲ್ಲ. ಅದೇ ರೀತಿ ನಮ್ಮ ರಾಜ್ಯವೂ ಆರ್ಥಿಕತೆಯಲ್ಲಿ ಕೊನೆಯ ಸ್ಥಾನಕ್ಕೆ ಬರಲಿದೆ. ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಿ ದುಡ್ಡು ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಹಿಂದೆ ಸರ್ಕಾರ ಪಾರ್ಕಿಂಗ್‌ ಕಾಂಪ್ಲೆಕ್ಸ್‌, ಹಾಕಿ ಸ್ಟೇಡಿಯಂನ ಕಟ್ಟಡವನ್ನು ಗುತ್ತಿಗೆಗೆ ನೀಡಿ ಮಾರಾಟ ಮಾಡಿತ್ತು. ಈಗ ಆರು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಸುಮಾರು ಐವತ್ತು ವರ್ಷಕ್ಕೆ ಗುತ್ತಿಗೆಗೆ ನೀಡಲಾಗುತ್ತಿದೆ. 


ಇದನ್ನೂ ಓದಿ:ಬೀದರ್ ನಗರದ ಮನ್ನಿಯರ್ ತಾಲೀಮ್ ನಿವಾಸಿ ಶತಾಯುಷಿ‌


ಇದು ಮಾರಾಟದ ಮಾದರಿಯಲ್ಲೇ ಇದೆ. ಇಂದಿರಾನಗರ, ಎಚ್‌ಎಸ್‌ಆರ್‌ ಲೇಔಟ್‌, ಆಸ್ಟಿನ್‌ ಟೌನ್‌, ಕೋರಮಂಗಲ, ವಿಜಯನಗರ, ಆರ್‌.ಟಿ.ನಗರ, ಸದಾಶಿವನಗರ ಕಾಂಪ್ಲೆಕ್ಸ್‌ಗಳು ಬಿಡಿಎ ಸ್ವತ್ತು. ಈಗ ಇದನ್ನು ನುಂಗಣ್ಣಗಳು ನುಂಗಲು ಹೊರಟಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಈ ಕಾರ್ಯಕ್ಕೆ ಮುಂದಾದಾಗ ಜನರು ಪ್ರತಿಭಟಿಸಿದ್ದರು. ಈಗ ಮತ್ತೆ ಈ ಕಾರ್ಯಕ್ಕೆ ಮುಂದಾಗಿದ್ದು, ಜನರು ಪ್ರತಿಭಟನೆ ಮಾಡಿದ್ದಾರೆ. ಇದರಲ್ಲಿ 200 ಕೋಟಿ ರೂ. ಗೂ ಅಧಿಕ ಕಿಕ್‌ಬ್ಯಾಕ್‌ ಇದೆ. ಇದು ಸುಮಾರು 3,000 ಕೋಟಿ ರೂ. ಮೌಲ್ಯದ ಆಸ್ತಿಗಳಾಗಿವೆ ಎಂದು ಹೇಳಿದರು. 


ಸರ್ಕಾರವೇ ಹೀಗೆ ನುಂಗುವ ಕ್ರಮದ ವಿರುದ್ಧ ಪ್ರತಿಭಟಿಸಲಾಗುವುದು. ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ಬೇರೆ ಮಾರ್ಗ ನೋಡಲಿ. ಕೂಡಲೇ ಈ ಟೆಂಡರ್‌ ರದ್ದುಪಡಿಸಲಿ. ಇಲ್ಲವಾದರೆ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. 


ಇದನ್ನೂ ಓದಿ:ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ತುಷಾರ್ ಗಿರಿನಾಥ್


ಯಡಿಯೂರಪ್ಪನವರ ಸರ್ಕಾರ ಇದ್ದಾಗ ಈ ಕಡತ ಬಂದಿತ್ತು. ಇದು ಲೂಟಿ ಮಾಡುವ ಸ್ಕೀಮ್‌ ಎಂದಿದ್ದಕ್ಕೆ ಯಡಿಯೂರಪ್ಪ ಅದನ್ನು ವಾಪಸ್‌ ಕಳುಹಿಸಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಈ ಲೂಟಿ ಮಾಫಿಯಾ ಮತ್ತೆ ಮುಂದೆ ಬಂದಿತ್ತು. ಆಗಲೂ ಮನವಿ ವಜಾ ಮಾಡಲಾಗಿತ್ತು. ಈಗ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಗೆ ಕಪ್ಪ ನೀಡಲು ಆಸ್ತಿ ಲೂಟಿ ಮಾಡಲು ಹೊರಟಿದ್ದಾರೆ. ಬೆಂಗಳೂರಿನ ಜನರು ಕೂಡ ಇದರ ವಿರುದ್ಧ ನಿಲ್ಲಬೇಕು ಎಂದು ಕೋರಿದರು. 


ಬರಗಾಲದಿಂದ ನೊಂದ ರೈತರಿಗೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೊಳಿಸಿದೆ. ಈಗ ರಾಜ್ಯ ಸರ್ಕಾರ ರೈತರ ಖಾತೆಗೆ ಹಣ ನೀಡುತ್ತಿದ್ದು, ಇದನ್ನು ಸ್ವಾಗತ ಮಾಡುತ್ತೇನೆ. ಆದರೆ ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾಲು ಇಲ್ಲ. ಹಿಂದೆ ಬಿಜೆಪಿ ಸರ್ಕಾರದಿಂದಲೂ ಪರಿಹಾರ ಕೊಡಲಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸರ್ಕಾರದ ಪಾಲನ್ನು ನೀಡಬೇಕಿದೆ. ಪರಿಹಾರ ಶೂನ್ಯವಾದರೆ ಜನರು ಮುಖಕ್ಕೆ ಮಂಗಳಾರತಿ ಮಾಡುತ್ತಾರೆ ಎಂದರು. 


ಇದನ್ನೂ ಓದಿ:ಕೈ ಅಭ್ಯರ್ಥಿ ರಾಧಾಕೃಷ್ಣ, ಸಚಿವ ಪ್ರಿಯಾಂಕ್‌ ಖರ್ಗೆ ಮತದಾನ


ಸರ್ಕಾರ ವಜಾಗೆ ಆಗ್ರಹ : ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೋಗಲು ಕಾಂಗ್ರೆಸ್‌ ಕಾರಣ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಲೆಂದೇ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಹೀಗೆ ಪ್ಲಾನ್‌ ಮಾಡಿದ್ದಾರೆ. ಚಿತ್ರಕಥೆಯನ್ನು ಸುರ್ಜೇವಾಲ ಬರೆದಿದ್ದು, ಸಿದ್ದರಾಮಯ್ಯ ನಿರ್ದೇಶನ ಹಾಗೂ ಡಿ.ಕೆ.ಶಿವಕುಮಾರ್‌ ನಿರ್ಮಾಣ ಮಾಡಿದ್ದಾರೆ. ವೀರೇಂದ್ರ ಪಾಟೀಲ್‌ ಅವರಿಂದ ಅಧಿಕಾರ ಕಿತ್ತುಕೊಂಡು, ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿ ಲಿಂಗಾಯತರಿಗೆ ಕಾಂಗ್ರೆಸ್‌ ಅಪಮಾನ ಮಾಡಿತ್ತು. 


ಈಗ ಒಕ್ಕಲಿಗರನ್ನು ಟಾರ್ಗೆಟ್‌ ಮಾಡಿ ಒಂದು ಲಕ್ಷ ಪೆನ್‌ಡ್ರೈವ್‌ ತಯಾರು ಮಾಡಿ ಹಂಚಲಾಗಿದೆ. ಎಸ್‌ಐಟಿ ರಬ್ಬರ್‌ ಸ್ಟಾಂಪ್‌ ಆಗಿದ್ದು, ಸಿಎಂ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತದೆ. ವೀಡಿಯೋ ಹಂಚುವುದು ಅಪರಾಧ ಎಂದೇ ಎಸ್‌ಐಟಿ ಹೇಳಿದೆ. ಪೆನ್‌ಡ್ರೈವ್‌ ಕೊಟ್ಟ ಚಾಲಕನನ್ನು ಜೈಲಿಗೆ ಹಾಕಿಲ್ಲ. ಪೆನ್‌ಡ್ರೈವ್‌ ಹಂಚಿದವರಲ್ಲಿ ಎಷ್ಟು ಜನರನ್ನು ಎಸ್‌ಐಟಿ ಜೈಲಿಗೆ ಹಾಕಿದೆ ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಸರ್ಕಾರದ ಪಾತ್ರವಿದೆ ಎಂದು ಕಾನೂನು ತಜ್ಞರೇ ಹೇಳಿದ್ದಾರೆ. ಆದ್ದರಿಂದ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.