ತಮಟೆ ಬಾರಿಸಿ ಎಲ್ಲರ ಗಮನಸೆಳೆದ ರಾಹುಲ್ ಗಾಂಧಿ!
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತಮಟೆ ಬಾರಿಸುವ ಮೂಲಕ ಜನರ ಗಮನ ಸೆಳೆದರು.
ಬೆಳಗಾವಿ : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಜಗ್ಗಲಿಗೆ ಹಂತದ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ ಇಂದು ಬೆಳಗಾವಿ ಜಿಲ್ಲೆಯ ವಿವಿಧ ದೇವಾಲಯಗಳಿಗೆ ನೀಡಿದರು. ಮೊದಲಿಗೆ ರಾಮದುರ್ಗದಲ್ಲಿನ ಗೋಡಚಿ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಆಶೀರ್ವಾದ ಪಡೆದ ರಾಹುಲ್ ಗಾಂಧಿ ನಂತರ ಸವದತ್ತಿ ರೇಣುಕ ಯಲ್ಲಮನ ದೇವಸ್ಥಾನದ ಬಳಿ ಜಗ್ಗಲಿಗೆ ಬಡಿಯುವ ಮೂಲಕ ಎಲ್ಲರ ಗಮನ ಸೆಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಹುಲ್'ಗೆ ಸಾಥ್ ನೀಡಿ ಹೆಜ್ಜೆ ಹಾಕಿದರು.
ಇದಕ್ಕೂ ಮುನ್ನ, ರಾಮದುರ್ಗದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. "ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಶ್ರೀಮಂತ ವರ್ಗದವರಿಗಾಗಿ ಮಾತ್ರ ಆಡಳಿತ ನಡೆಸುತ್ತಿದ್ದಾರೆ. ತಮ್ಮನ್ನು ಈ ದೇಶದ ಕಾವಲುಗಾರ ಎನ್ನುವ ಮೋದಿ, ಅಮಿತ್ ಶಾ ಪುತ್ರ ಜಯ್ ಶಾ ಹಗರಣದ ಬಗ್ಗೆ ಎಂದಾದರೂ ಮಾತನಾಡಿದ್ದಾರಾ? ನೀರವ್ ಮೋದಿ ಕೊಳ್ಳೆ ಹೊಡೆದು ಹೋದರೂ ಈ ಕಾವಲುಗಾರ ಮಾತನಾಡಲಿಲ್ಲ. ಲಕ್ಷಾಂತರ ಮಂದಿ ಓರ್ವ ವ್ಯಕ್ತಿಯಿಂದ ಪರಿತಪಿಸುವಂತಾಗಿದೆ. ಶ್ರೀಮಂತರು ತಮ್ಮ ಕಪ್ಪು ಹಣವನ್ನು ಪರಿವರ್ತಿಸಿಕೊಂಡು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎಂದು ಲೇವಡಿ ಮಾಡಿದರು.
ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರ ಎನ್ನುವ ನೈತಿಕತೆ ನಿಮಗಿದೆಯೇ? ಹಾಗಿದ್ದರೆ ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತಿನಲ್ಲಿ ಲೋಕಾಯುಕ್ತವನ್ನು ಏಕೆ ನೇಮಿಸಲಿಲ್ಲ? ಎಂದು ಪ್ರಶ್ನಿಸಿದರಲ್ಲದೆ, ಮೊದಲು ನೀವು ನುಡಿದಂತೆ ನಡೆಯುವುದನ್ನು ಕಲಿಯಿರಿ ಎಂದು ಮೋದಿ ಅವರನ್ನು ಲೇವಡಿ ಮಾಡಿದರು.