ಬೀದರ್: ಸಂಸತ್ತಿನಲ್ಲಿ ರಾಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯಾವುದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಸಿದ್ದ. ಮೋದಿ ಅವರಿಗೆ ಧೈರ್ಯವಿದ್ದರೆ ನನ್ನೊಂದಿಗೆ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ 'ಜನದನಿ' ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸತ್ತಿನಲ್ಲಿ ರಾಫೆಲ್ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದಾಗಲೂ ಪ್ರಧಾನಿ ಮೋದಿ ಅವರು ಒಂದು ಮಾತೂ ಆಡಲಿಲ್ಲ. ರಹಸ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಜನರಿಗೆ ಸುಳ್ಳು ಹೇಳಿದರೂ. ಆದರೆ ಇದನ್ನು ಫ್ರಾನ್ಸ್ ಅಧ್ಯಕ್ಷರು ಅಲ್ಲಗಳೆದಿದ್ದಾರೆ. ಯುಪಿಎ ಸರ್ಕಾರ ಫ್ರಾನ್ಸ್ ನಿಂದ ಪ್ರತಿ ರಾಫೆಲ್ ಯುದ್ಧ ವಿಮಾನವನ್ನು ರೂ.565 ಕೋಟಿ ರೂ.ಗಳಿಗೆ ಕೊಳ್ಳುವ ಇಂಗಿತ ವ್ಯಕ್ತ ಪಡಿಸಿತ್ತು. ಆದರೆ, ಮೋದಿ ಸರ್ಕಾರ ಈಗ ರೂ. 1,600 ಕೋಟಿ ರೂ.ಗಳಿಗೆ ಕೊಳ್ಳಲು ಹೊರಟಿದೆ ಎಂದು ಆರೋಪಿಸಿದರು. 


ಮುಂದುವರೆದು ಮಾತನಾಡಿದ ಅವರು, ಹಿಂದಿನ ಯುಪಿಎ ಸರ್ಕಾರ ರಾಫೆಲ್ ಯುದ್ಧ ವಿಮಾನಗಳನ್ನು ಕರ್ನಾಟಕದ ಹೆಚ್ಎಎಲ್ ನಲ್ಲಿ ನಿರ್ಮಿಸಲು ನಿರ್ಧರಿಸಿತ್ತು. ಆದರೆ ಬಿಜೆಪಿ ಆ ಅವಕಾಶವನ್ನು ಕಸಿದುಕೊಂಡಿತು. ಹೀಗಾಗಿ ಕರ್ನಾಟಕದ ಯುವಕರು ನಿರುದ್ಯೋಗಿಗಳಾಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ರಾಹುಲ್ ಆರೋಪಿಸಿದರು.


ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಆದರೆ ಉದ್ಯಮಿಗಳ 2.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಮೋದಿಯವರು ಮೊದಲು ತಾವು 15 ಜನರಿಗೆ ಮಾತ್ರ ಪ್ರಧಾನಿಯಲ್ಲ, ಇಡೀ ದೇಶದ ಪ್ರಧಾನಿ ಎಂಬುದನ್ನು ಮೊದಲು ಅರಿಯಬೇಕಿದೆ. ಕೇವಲ ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದು ಘೋಷಣೆ ಮಾಡುತ್ತದೆಯಾದರೂ ಮಹಿಳಾ ಮತ್ತು ಮಕ್ಕಳ ಸುರಕ್ಷತೆಯನ್ನು ಮರೆತಿದೆ ಎಂದು ಟೀಕಿಸಿದರು.


ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಮಾತನಾಡಿ, ದೇಶದಲ್ಲಿ ಅಭದ್ರತೆ, ಅಸುರಕ್ಷತೆ ಹೆಚ್ಚಾಗಿದೆ. ದಲಿತರು, ಮಹಿಳೆಯರ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ಈ ದುರಾಚಾರವನ್ನು ನಾವು ಮೋದಿ ಸರ್ಕಾರದಿಂದ ನಿರೀಕ್ಷಿಸಿರಲಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.