`ಕಾರ್ಮಿಕರ ಬದುಕನ್ನು ಹಸನ ಮಾಡಲು ರಾಹುಲ್ ಗಾಂಧಿಯವರು ಹೋರಾಟ ಮಾಡುತ್ತಿದ್ದಾರೆ`-ಡಿಕೆಶಿ
ಬಿಜೆಪಿ ಆಡಳಿತದಲ್ಲಿ ಕರ್ನಾಟಕ ರಾಜ್ಯ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದ್ದು, ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಹಾಗೂ ರಾಜ್ಯದ ರೈತ ಹಾಗೂ ಕಾರ್ಮಿಕರ ಬದುಕನ್ನು ಹಸನ ಮಾಡಲು ರಾಹುಲ್ ಗಾಂಧಿಯವರು ಹೋರಾಟ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ಕರ್ನಾಟಕ ರಾಜ್ಯ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದ್ದು, ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಹಾಗೂ ರಾಜ್ಯದ ರೈತ ಹಾಗೂ ಕಾರ್ಮಿಕರ ಬದುಕನ್ನು ಹಸನ ಮಾಡಲು ರಾಹುಲ್ ಗಾಂಧಿಯವರು ಹೋರಾಟ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿಯವರು ಐದು ಪ್ರಮುಖ ವಿಚಾರವಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಆದರೆ ಈಗ ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಸಮಾಜವನ್ನು ಒಡೆಯಲಾಗುತ್ತಿದೆ. ಹೀಗಾಗಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿ ದೇಶ ಹಾಗೂ ರಾಜ್ಯವನ್ನು ಒಂದುಗೂಡಿಸಲು ಈ ಪಾದಯಾತ್ರೆ ಮಾಡಲಾಗುತ್ತಿದೆ.
ಇದನ್ನೂ ಓದಿ: "ಕನ್ನಡ ಕಡ್ಡಾಯ" ಕಾನೂನು ಇದೇ ಅಧಿವೇಶನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ
ಹಾಗೆಂದು ನೀವು ನಿಮ್ಮ ಜಾತಿ, ಧರ್ಮವನ್ನು ತ್ಯಜಿಸಿ ಎಂದು ಹೇಳುತ್ತಿಲ್ಲ. ನಾವೆಲ್ಲರೂ ಭಾರತೀಯರು. ನಮಗೆ ದೇಶದ ತ್ರಿವರ್ಣ ಧ್ವಜವನ್ನು ಧರಿಸುವ ಶಕ್ತಿ ಇದೆಯೇ ಹೊರತು ಬೇರೆಯವರಿಗಿಲ್ಲ. ಇದನ್ನು ದೇಶಕ್ಕೆ ಕೊಟ್ಟವರು ಕಾಂಗ್ರೆಸ್ಸಿಗರು. ನಿಮ್ಮ ಹಿರಿಯರು ತ್ಯಾಗ, ಬಲಿದಾನ ಮಾಡಿ ದೇಶಕ್ಕೆ ಸ್ವಾತಂತ್ರ್ಯ, ತ್ರಿವರ್ಣ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ನೀಡಿದ್ದಾರೆ. ಇದೆಲ್ಲವನ್ನು ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ನಿರ್ಮಿಸಿದ್ದು, ಇದನ್ನು ನಾವೆಲ್ಲರೂ ಸೇರಿ ಉಳಿಸಿಕೊಳ್ಳಬೇಕು.
ಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನಿ ಆಗಬಹುದಿತ್ತು. ಆದರೆ ಅವರು ಈ ದೇಶಕ್ಕೆ ಆರ್ಥಿಕ ತಜ್ಞನ ಅವಶ್ಯಕತೆ ಇದೆ ಎಂದು ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟರು. ರಾಹುಲ್ ಗಾಂಧಿ ಅವರು ಮಂತ್ರಿ, ಉಪಪ್ರಧಾನಿ ಆಗಬಹುದಿತ್ತು. ಅವರು ಅಧಿಕಾರ ತ್ಯಜಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.ಚಾಮರಾಜನಗರದ ಗುಂಡ್ಲುಪೇಟೆಯಿಂದ ರಾಜ್ಯ ಪ್ರವೇಶ ಮಾಡಲಿದೆ. ನಾನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಹೋಗಿ ನಮ್ಮ ಕಾರ್ಯಕರ್ತರಲ್ಲಿ ಈ ಯಾತ್ರೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೂ ಅದರ ಜವಾಬ್ದಾರಿಯನ್ನು ವಿರೋಧ ಪಕ್ಷದ ನಾಯಕರಿಗೆ ನೀಡಿ, ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿದ್ದೇನೆ. ಕನ್ಯಾಕುಮಾರಿಯಿಂದ ಆರಂಭವಾದ ಈ ಯಾತ್ರೆಗೆ ಜನ ಅತ್ಯುತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮುಂದಿನ ಎರಡು ವಾರದಲ್ಲಿ ಯಾತ್ರೆ ನಮ್ಮ ರಾಜ್ಯ ಪ್ರವೇಶಿಸಲಿದೆ. ನಾವು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪಕ್ಷಾತೀತವಾಗಿ ಎಲ್ಲರಿಗೂ ಈ ಪಾದಯಾತ್ರೆಯಲ್ಲಿ ಅವಕಾಶ ನೀಡಿದ್ದೇವೆ. ಯಾತ್ರೆ ಮಧ್ಯೆ, ಯುವಕರು, ರೈತರು, ಕಾರ್ಮಿಕರು, ಮಹಿಳೆಯರ ಜತೆ ರಾಹುಲ್ ಗಾಂಧಿ ಅವರು ಸಂವಾದ ನಡೆಸಲಿದ್ದಾರೆ. ಪ್ರತಿ ನಿತ್ಯ ಇಬ್ಬರು ಶಾಸಕರಿಗೆ ಜವಾಬ್ದಾರಿ ನೀಡಿದ್ದು, ಅವರೂ ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದ್ದು, 2ನೇ ಬಾರಿ ಆಯ್ಕೆಯಾಗುತ್ತೀರಾ ಎಂಬ ಪ್ರಶ್ನೆಗೆ, ‘ನನಗೆ ಗೊತ್ತಿಲ್ಲ, ಪಕ್ಷದ ಪದಾಧಿಕಾರಿಗಳು, ನಾಯಕರು, ಮುಖಂಡರು, ಸದಸ್ಯರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕು. ಚುನಾವಣೆ ಪಿಆರ್ ಒ ಆಗಿ ತಮಿಳುನಾಡಿನಿಂದ ನಾಚಿಯಪ್ಪನ್ ಅವರು ಪದಾಧಿಕಾರಿಗಳ ಜತೆ ಸಭೆ ನಡೆಸಿ ನಂತರ ಚುನಾವಣೆ ನಡೆಸಲಿದ್ದಾರೆ. ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಈ ತಿಂಗಳ ಅಂತ್ಯದೊಳಗೆ ಈ ಪ್ರಕ್ರಿಯೆ ಮುಗಿಸಿ ನಂತರ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ನಡೆಸಬೇಕಿದೆ. ನಾನು ಮತ್ತೆ ಮುಂದುವರಿಯುತ್ತೇನೋ ಇಲ್ಲವೋ ಗೊತ್ತಿಲ್ಲ. ಪಕ್ಷ ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನನ್ನ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ’ ಎಂದು ತಿಳಿಸಿದರು.
ಇದನ್ನೂ ಓದಿ: ಧಮ್ ಇದ್ರೆ ಸೋನಿಯಾ, ರಾಹುಲ್ ಅವರಿಂದ ʼಹಿಂದಿ ದಿವಸ್ʼ ರದ್ದು ಮಾಡುತ್ತೇವೆ ಎಂದು ಹೇಳಿಸಿ.!
ಅಧಿವೇಶನ ಕರೆಯಿರಿ ಎಂದ ಶಿವಕುಮಾರ್ ಅವರೇ ಗೈರಾಗಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ನಿಜ, ಅಧಿವೇಶನ ನಡೆಸುವಂತೆ ನಾನು ಅಗ್ರಹಿಸಿದ್ದೆ. ಪಕ್ಷದ ವಿಚಾರದಲ್ಲಿ ಇದು ಬಹಳ ಮುಖ್ಯವಾದ ಜವಾಬ್ದಾರಿಯಾಗಿದ್ದು, ಅಧಿವೇಶನದಲ್ಲಿ ಬೇರೆ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಅಧ್ಯಕ್ಷನಾಗಿ ನಾನು ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ’ ಎಂದರು.
ಈ ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ್ದೆಲ್ಲವೂ ಭ್ರಷ್ಟಾಚಾರ ಎಂಬ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆ ವಿಚಾರವಾಗಿ ಕೇಳಿದಾಗ, ‘ಕಳೆದ ಮೂರು ವರ್ಷದಿಂದ ಇವರು ಏನು ಮಾಡುತ್ತಿದ್ದರು? ಇವರ ಬಾಯಿ, ಪೆನ್ನು ಏನಾಗಿತ್ತು? ಇಷ್ಟು ದಿನ ಸುಮ್ಮನೆ ಇದ್ದದ್ದು ಯಾಕೆ? ಮೊದಲೇ ತನಿಖೆ ಮಾಡಿಸಿದ್ದರೆ ಇಷ್ಟು ಹೊತ್ತಿಗೆ ಗಲ್ಲಿಗೆ ಹಾಕಬಹುದಿತ್ತಲ್ಲವೇ? ಯಾಕೆ ಹಾಕಿಲ್ಲ?’ ಎಂದು ತಿರುಗೇಟು ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.