ರಾಹುಲ್ ಗಾಂಧಿಗೆ ಸೋಲಿನ ಭಯವಿಲ್ಲ: ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿಗೆ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸೋಲಿನ ಭಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಾದಗಿರಿ: ರಾಹುಲ್ ಗಾಂಧಿಗೆ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸೋಲಿನ ಭಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಉತ್ತರಪ್ರದೇಶದ ಅಮೇಥಿ ಕ್ಷೇತ್ರದೊಂದಿಗೆ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ಜನರ ಒತ್ತಾಯದ ಮೇರೆಗೆ ಅಲ್ಲಿಯೂ ಸ್ಪರ್ಧಿಸುತ್ತಾರೆಯೇ ಹೊರತು ಅಮೇಥಿ ಕ್ಷೇತ್ರದಲ್ಲಿ ಸೋಲುವ ಭಯದಿಂದಲ್ಲ ಎಂದು ಖರ್ಗೆ ಹೇಳಿದ್ದಾರೆ.
ರಾಹುಲ್ ಗಾಂಧಿ ಕೇರಳದ ವಯನಾಡ್ ನಿಂದ ಸ್ಪರ್ಧಿಸುವುದಾಗಿ ಘೋಷಿಸದ ಬಳಿಕ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ, ಇದಕ್ಕೆ ಕಾರಣ ನೀಡಿರುವ ರಾಹುಲ್ ಗಾಂಧಿ, ದಕ್ಷಿಣ ಭಾರತದ ಜನರಿಗೆ ಪ್ರಧಾನಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಭಾವನೆ ಇದೆ. ದೇಶದ ಪ್ರಮುಖ ನಿರ್ಧಾರಗಳಲ್ಲಿ ದಕ್ಷಿಣ ಭಾರತದವರನ್ನು ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಜನತೆಗೆ ನಾವು ಅವರೊಂದಿಗೆ ಇದ್ದೇವೆ ಎಂಬ ಸಂದೇಶ ರವಾನೆ ಮಾಡಲು ವಯಾನಾಡ್ ನಿಂದ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ.