ಗುಜರಾತ್`ನಂತೆ ರಾಜ್ಯದಲ್ಲೂ ರಾಹುಲ್ ಗಾಂಧಿ ಟೆಂಪಲ್ ರನ್...!
ರಾಜ್ಯ ವಿಧಾನಸಭಾ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ...
ಬೆಂಗಳೂರು: ಹಿಂದೂತ್ವದ ಮೂಲಕವೇ ಬಿಜೆಪಿಗೆ ಕೌಂಟರ್ ಕೊಡಲು ಕಾಂಗ್ರೆಸ್ ಯೋಜಿಸಿದ್ದು, ಗುಜರಾತ್'ನಂತೆ ರಾಜ್ಯದಲ್ಲೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಟೆಂಪಲ್ ರನ್ ನಡೆಯಲಿದೆ. ರಾಜ್ಯ ವಿಧಾನಸಭಾ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ 10 ರಿಂದ ತಮ್ಮ ಮೊದಲ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವ ರಾಹುಲ್ ಗಾಂಧಿ, ಈ ಸಮಯದಲ್ಲಿ ಶೃಂಗೇರಿ ಶಾರದಾ ಮಠ ಮತ್ತು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 20 ರಿಂದ ಎರಡನೇ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
ಫೆಬ್ರವರಿ 10ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳುವ ರಾಹುಲ್ ಕಾರ್ಯಕ್ರಮಗಳ ಪಟ್ಟಿ ಇಂತಿದೆ...
* ಫೆ. 10: ಶಿವಮೊಗ್ಗ, ಭದ್ರಾವತಿ, ತರಿಕೆರೆ, ಕಡೂರು, ಚಿಕ್ಕಮಗಳೂರಿಗೆ ಭೇಟಿ ನೀಡಲಿರುವ ರಾಹುಲ್ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅಂದು ಸಂಜೆ ಚಿಕ್ಕಮಗಳೂರು ಜಿಲ್ಲೆಯ ಅಡಿಗೆ ಮತ್ತು ಕಾಫಿ ಬೆಳೆಗಾರರ ಜೊತೆ ಸಂವಾದ ನಡೆಸಲಿರುವ ರಾಹುಲ್ ಕಾಫಿ ನಾಡಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
* ಫೆ. 11: ಚಿಕ್ಕಮಗಳೂರು ಜಿಲ್ಲೆಯಿಂದ ಹೊರಟು ಶೃಂಗೇರಿ ಮಠಕ್ಕೆ ರಾಹುಲ್ ಭೇಟಿ ನೀಡಲಿದ್ದು, ಬಳಿಕ ಮಂಗಳೂರು, ಬ್ರಹ್ಮಾವರ, ಮಲ್ಕಿ, ಕುಂದಾಪುರ, ಉಡುಪಿಯಲ್ಲಿ ರೋಡ ಶೋ ನಡೆಸಲಿದ್ದಾರೆ. ಈ ಕಾರ್ಯಕ್ರಮಗಳ ನಂತರ ಅಂದು ಸಂಜೆ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ರಾಹುಲ್ ಭೇಟಿ ನೀಡಲಿದ್ದು, ಮಠದಲ್ಲೇ ತಂಗಲಿದ್ದಾರೆ.
* ಫೆ. 12: ಕೊನೆಯ ದಿನದ ಪ್ರವಾಸದಲ್ಲಿ ರಾಹುಲ್ ತುಮಕೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಗುಬ್ಬಿ, ತಿಪಟೂರು, ಅರಸೀಕೆರೆಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಗುಜರಾತ್ ನಂತೆ ರಾಜ್ಯದಲ್ಲೂ ಟೆಂಪಲ್ ರನ್'ಗೆ ಸಿದ್ಧವಾಗಿರುವ ರಾಹುಲ್ ಗಾಂಧಿ ಅವರಿಗೆ ರಾಜ್ಯ ಕಾಂಗ್ರೇಸ್ ನಾಯಕರು ಸಾಥ್ ನೀಡಲಿದ್ದಾರೆ. ಇವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಥ್ ನೀಡುವುದು ಮಾತ್ರ ಅನುಮಾನವಾಗಿದೆ.
ಉಡುಪಿ ಶ್ರೀ ಕೃಷ್ಣ ಮಠದ ಮೇಲೆ ಸಿಎಂ ಮುನಿಸು...
ಜಾತಿ ಕಡೆಗಣಿಸುವ ವಿಚಾರಕ್ಕೆ ಉಡುಪಿ ಶ್ರೀ ಕೃಷ್ಣ ಮಠದ ಮೇಲೆ ಅಸಮಧಾನಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೂ ಕೂಡ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ.
ಎಷ್ಟೋ ಸಾರಿ ಸಿಎಂ ಉಡುಪಿಗೆ ಹೋದರೂ ಸಹ ಶ್ರೀ ಕೃಷ್ಣ ಮಠಕ್ಕೆ ಭೇಟಿ ಕೊಡದ ಸಿದ್ದರಾಮಯ್ಯ,
ಈಗ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಅವರಿಗೆ ಸಾಥ್ ನಿಡುವರೇ ಎಂಬುದು ಅನುಮಾನವಾಗಿದೆ.