ಬೆಂಗಳೂರಿನಲ್ಲಿ ರಾಜ್ಯ ರಾಜಕೀಯ ವಿದ್ಯಮಾನಗಳ ಮಾಹಿತಿ ಪಡೆದ ರಾಹುಲ್
ಎಚ್ಎಎಲ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲು ಇಂದು ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.
ಬೆಂಗಳೂರು: ರಫೇಲ್ ಹಗರಣ ಕುರಿತಾದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ರಾಜ್ಯ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್, ಸಚಿವ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಕುಮಾರಕೃಪಾ ಗೆಸ್ಟ್ಹೌಸ್ಗೆ ಕರೆದೊಯ್ದರು. ಕುಮಾರಕೃಪಾ ಗೆಸ್ಟ್ಹೌಸ್ಗೆ ಬಂದ ರಾಹುಲ್ ಗಾಂಧಿಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಪ್ರಮುಖ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಹಾಲಿ ಸಚಿವರಿಂದ ಸ್ವಾಗತಿಸಲಾಯಿತು.
ಬಳಿಕ ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿಯಾಗಿ ಕೆಲ ಕಾಲ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.
ಮೈತ್ರಿ ಸರ್ಕಾರದ ಕಾರ್ಯವೈಖರಿ ಬಗ್ಗೆ ರಾಹುಲ್ ಗಾಂಧಿಗೆ ಸಿಎಂ ಮಾಹಿತಿ ನೀಡಿದರು. ಈ ವೇಳೆ ಎನ್ ಮಹೇಶ್ ರಾಜೀನಾಮೆ ಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ರಾಹುಲ್ ಗೆ ಮಾಹಿತಿ ನೀಡಿದರು.
ನಂತರ ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ ಸಭೆ ನಡೆಸಿದರು.
ಕಾಂಗ್ರೆಸ್ನಲ್ಲಿ ಮಾಜಿ ಸಚಿವರಿಗೆ ಯಾವ ಬೆಲೆಯೂ ಇಲ್ಲವೇ?
ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಹಾಲಿ ಕಾಂಗ್ರೆಸ್ ಸಚಿವರಿಗೆ ಮಾತ್ರ ಗೆಸ್ಟ್ಹೌಸ್ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ರಾಹುಲ್ ಭೇಟಿಗೆಂದು ಬಂದಿದ್ದ ಕಾಂಗ್ರೆಸಿನ ಕೆಲ ಮಾಜಿ ಸಚಿವರಿಗೆ ಒಳಗೆ ತೆರಳಲು ಅವಕಾಶ ಸಿಗದೆ, ಕಾಂಗ್ರೆಸ್ನಲ್ಲಿ ಮಾಜಿ ಸಚಿವರಿಗೆ ಯಾವ ಬೆಲೆಯೂ ಇಲ್ಲವೇ ಎಂಬ ಚರ್ಚೆಗೆ ಗ್ರಾಸವಾಯಿತು.