ಕೊಪ್ಪಳದ ಹುಲಿಗೆಮ್ಮ ದೇವಿ ದರ್ಶನ ಪಡೆದ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೊಸಪೇಟೆಯಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಬಳಿಕ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಕೊಪ್ಪಳ: ನಾಲ್ಕು ದಿನಗಳ ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೊಸಪೇಟೆಯಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಬಳಿಕ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಇದೇ ಮೊದಲ ಬಾರಿಗೆ ಕೊಪ್ಪಳಕ್ಕೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಹುಲಿಗೆಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದರು. ನಂತರ ಅಲ್ಲಿದ್ದ ಜನರನ್ನು ಭೇಟಿ ಮಾಡಿ, ಧನ್ಯವಾದ ಸಲ್ಲಿಸಿ ತೆರಳಿದರು.
ನಂತರ ಅಲ್ಲಿಂದ ಕೊಪ್ಪಳದ ಗವಿ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಕರ್ತೃ ಗದ್ದುಗೆಯ ದರ್ಶನ ಪಡೆದರು. ಮಠದಲ್ಲಿ ಮಕ್ಕಳೊಂದಿಗೆ ಕೆಲ ಹೊತ್ತು ಸಮಯ ಕಳೆದು, ಅಭಿನವ ಗವಿಶ್ರೀಗಳ ಆಶೀರ್ವಾದ ಪಡೆದರು.
ರಾಹುಲ್ ಆಗಮನದ ಹಿನ್ನೆಲೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಥ್ ನೀಡಿದರು.
ರಾಹುಲ್ ಪ್ರವಾಸದಿಂದಾಗಿ ಕೊಪ್ಪಳ-ಹೊಸಪೇಟೆ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಪರದಾಡುವಂತಾಗಿತ್ತು. ಪೊಲೀಸರು ಸುಮಾರು ಒಂದು ಗಂಟೆ ಕಾಲ ಆ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದರು. ಇದರಿಂದ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲುಂವತಾಯಿತು.