ರಮೇಶ್ ಜಾರಕಿಹೊಳಿ ಡಿಎನ್ಎ ಅಲ್ಲಿಯೇ ಕಾಂಗ್ರೆಸ್ ಇದೆ: ದಿನೇಶ್ ಗುಂಡೂರಾವ್
ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಯಾವತ್ತು ಅನ್ಯಾಯ ಮಾಡಿಲ್ಲ. ಐದು ಬಾರಿ ಪಕ್ಷದಿಂದ ಶಾಸಕರಾಗಿರುವ ಅವರ ಬಗ್ಗೆ ಕಾಂಗ್ರೆಸ್ ನಲ್ಲಿ ನಕಾರಾತ್ಮಕ ಅಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಡಿಎನ್ಎ ಅಲ್ಲಿಯೇ ಕಾಂಗ್ರೆಸ್ ಇದೆ. ಹಾಗಾಗಿ ಅವರು ಎಂದಿಗೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೋಳಿ ಅವರ ರಕ್ತ ಕಾಂಗ್ರೆಸ್ ರಕ್ತ. ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಹೋರಾಟ ಮಾಡಿದ್ದವರು, ಕಾಗ್ರೆಸ್ ಪಕ್ಷದಲ್ಲಿಯೇ ಇರುವವರು, ಮುಂದೆಯೂ ಇರುತ್ತಾರೆ. ಅವರ ಡಿಎನ್ಎ ಕಾಂಗ್ರೆಸ್. ಅದನ್ನು ಯಾರೂ ಸಹ ಬದಲಾಯಿಸಲು ಸಾಧ್ಯವಿಲ್ಲ. ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಈ ಯಾವುದೇ ಗೊಂದಲ ಇರುವುದಿಲ್ಲ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಯಾವತ್ತು ಅನ್ಯಾಯ ಮಾಡಿಲ್ಲ. ಐದು ಬಾರಿ ಪಕ್ಷದಿಂದ ಶಾಸಕರಾಗಿರುವ ಅವರ ಬಗ್ಗೆ ಕಾಂಗ್ರೆಸ್ ನಲ್ಲಿ ನಕಾರಾತ್ಮಕ ಅಭಿಪ್ರಾಯ ಇಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಅವರು ಎಚ್ಚರಿಕೆಯಿಂದ ಇರಬೇಕು. ಬಿಜೆಪಿಯವರ ಮಾತು ಕೇಳಿ ಪಕ್ಷ ತೊರೆಯುವ ನಿರ್ಧಾರ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವುದಿಲ್ಲ ಎಂದರು.
ಮುಂದುವರೆದು ಮಾತನಾಡುತ್ತಾ, ಜನತೆ ಇಂದು ಬಿಜೆಪಿಯ ಭ್ರಷ್ಟ ಮತ್ತು ಕೀಳುಮಟ್ಟದ ರಾಜಕಾರಣಕ್ಕೆ ಮೇ 23ರಂದು ಉತ್ತರ ನೀಡಲಿದ್ದಾರೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಉತ್ತಮ ಫಲಿತಾಂಶ ಬರಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದಲ್ಲಿ ಮೇ 19ರಂದು ನಡೆಯಲಿರುವ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆಯಾಗಿಯೇ ಎದುರಿಸುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಗುಂಡೂರಾವ್ ತಿಳಿಸಿದರು.