ಪತ್ರಕರ್ತನ ಹತ್ಯೆಗೆ ಸುಪಾರಿ ಪ್ರಕರಣ : ನಾಲ್ಕು ದಿನಗಳ ಸಿಸಿಬಿ ವಶಕ್ಕೆ ರವಿ ಬೆಳಗೆರೆ
‘ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರನ್ನು 4 ದಿನಗಳ ಕಾಲ ಸಿಸಿಬಿ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು : ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪದಡಿ ಬಂಧಿಯಾಗಿರುವ ‘ಹಾಯ್ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಅವರನ್ನು 4 ದಿನಗಳ ಕಾಲ ಸಿಸಿಬಿ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಶುಕ್ರವಾರ ಬೆಂಗಳೂರಿನ ಪದ್ಮನಾಭನಗರದ ಮನೆಯಲ್ಲಿ ರವಿ ಬೆಳಗೆರೆ ಅವರನ್ನು ಬಂಧಿಸಿದ ಪೊಲೀಸರು ಸಿಸಿಬಿ ಕಚೇರಿಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದರು. ಬಳಿಕ ಕೋರಮಂಗಲದ ಎನ್‌ಜಿವಿಯಲ್ಲಿರುವ 1ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ ಅವರ ಮನೆಗೆ ಹಾಜರುಪಡಿಸಿದಾಗ ಬೆಳಗೆರೆ ಅವರನ್ನು ನ್ಯಾಯಾಧೀಶರು 4 ದಿನ ಪೊಲೀಸ್ ವಶಕ್ಕೆ ನೀಡಿದ್ದಾರೆ.
ಎಫ್ಐಆರ್ ಪ್ರತಿ, ಶಶಿಧರ್ ನೀಡಿರುವ ಮಾಹಿತಿ ಎಲ್ಲವನ್ನೂ ನ್ಯಾಯಾಧೀಶರ ಗಮನಕ್ಕೆ ತಂದ ಸಿಸಿಬಿ ಪೊಲೀಸರು 5 ದಿನ ನಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ ರವಿ ಬೆಳಗೆರೆ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರ ಪರ ವಕೀಲ ದಿವಾಕರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಇದನ್ನು ಒಪ್ಪದ ನ್ಯಾಯಾಧೀಶರು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಆದೇಶಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ಶಶಿಧರ್ ಮುಂಡೇವಾಡಿ ಮೊದಲನೇ ಆರೋಪಿ, ಪತ್ರಕರ್ತ ರವಿ ಬೆಳಗೆರೆ ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ತಲೆಮರೆಸಿಕೊಂಡಿರುವ ವಿಜು ಬಡಗೇರ್ ಮೂರನೇ ಆರೋಪಿಯಾಗಿದ್ದಾನೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಇಂಡಿಯನ್ ಆರ್ಮ್ಸ್ ಆಕ್ಟ್, ಐಪಿಸಿ ಸೆಕ್ಷನ್ 120ಬಿ, 307ರ ಅಡಿ ಎಫ್‌ಐಆರ್ ದಾಖಲಾಗಿದೆ.
ಅಲ್ಲದೆ ಪೊಲೀಸರು ಪ್ರಕರಣ ಸಂಬಂಧ ರವಿ ಬೆಳಗೆರೆ ಅವರ ಮನೆ, ಕಚೇರಿ ಪರಿಶೀಲಿಸಿ ಒಂದು ಜಿಂಕೆ ಚರ್ಮ, ಒಂದು ಡಬಲ್ ಬ್ಯಾರಲ್ ಗನ್, 41 ಜೀವಂತ ಗುಂಡುಗಳನ್ನು ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸುನಿಲ್ ಹೆಗ್ಗರವಳ್ಳಿ ಅವರ ಮನೆ ಸುತ್ತ ಮುತ್ತ ಸಿಸಿಟಿವಿ ದೃಶ್ಯಗಳನ್ನು ಸಿಸ್ಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಶಿಧರ್ ಹೇಳಿರುವಂತೆ ಆ.28ರಂದು ಆತ ಸುನಿಲ್ ಅವರ ಮನೆಗೆ ಹೋಗಿದ್ದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
`ಅಪ್ಪ ನಿರಪರಾಧಿ'-ರವಿ ಬೆಳಗೆರೆ ಪುತ್ರಿ ಹೇಳಿಕೆ
ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ರವಿ ಬೆಳಗೆರೆ ಮಗಳು ಭಾವನಾ ಬೆಳಗೆರೆ '' ಇದು ಖಂಡಿತ ಸತ್ಯ ಅಲ್ಲ. ನನ್ನ ತಂದೆ ಒಬ್ಬ ಹೋರಾಟಗಾರ. ಇಂತಹ ಕೃತ್ಯ ಮಾಡುವವರನ್ನು ಪರಿವರ್ತನೆ ಮಾಡಿದ್ದಾರೆಯೇ ಹೊರತು ಅವರೆಂದೂ ಇಂತಹ ಕಾರ್ಯಕ್ಕೆ ಕೈಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಅಲ್ಲದೆ ಪೊಲೀಸರು ವಶಪಡಿಸಿಕೊಂಡಿರುವ ಗನ್ ಗೆ ಲೈಸನ್ಸ್ ಕುಉದ ಇದೆ'' ಎಂದು ಹೇಳಿದ್ದಾರೆ.
`ಇದು ನಂಬಲಸಾಧ್ಯ' - ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ
ರವಿ ಬೆಳೆಗೆರೆ ಸಂಪಾದಕತ್ವದ `ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಸುಮಾರು 14 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಸುನಿಲ್ ಹೆಗ್ಗರವಲ್ಲಿ ಅವರು 2014ರಲ್ಲಿ ಆ ಪತ್ರಿಕೆಯಿಂದ ಹೊರಬಂದಿದ್ದರು. ''ರವಿ ಬೆಳಗೆರೆಯವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ನನ್ನನ್ನು ಪತ್ರಿಕೆಗೆ ಮತ್ತೆ ಹಿಂದಿರುಗುವಂತೆ ಕರೆದಿದ್ದರು. ನಾನು ಯಾವುದೇ ತಪ್ಪು ಮಾಡಿದರೂ ಅದನ್ನು ತಿಡ್ಡಿ, ನಂಗೆ ಬುದ್ಧಿ ಹೇಳುವ ಸ್ವಾತಂತ್ರ್ಯ ಅವರಿಗಿತ್ತು. ಆದರೆ ಅವರು ನನ್ನ ಹತ್ಯೆಗೆ ಸುಪಾರಿ ನೀಡುತ್ತಾರೆಂದು ನನಗೆ ಊಹಿಸಿಕೊಳ್ಳಲೂ ಆಗುತ್ತಿಲ್ಲ'' ಎಂದು ಸುನಿಲ್ ಹೆಗ್ಗರವಳ್ಳಿ ಹೇಳಿದ್ದಾರೆ.
ನ್ಯಾಯಾಲಯ ತೀರ್ಮಾನಿಸಲಿದೆ- ಮುಖ್ಯಮಂತ್ರಿ ಸಿದ್ಧರಾಮಯ್ಯ
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಪ್ರಕರಣದ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ನ್ಯಾಯಾಲಯ ತೀರ್ಮಾನಿಸಲಿದೆ'' ಎಂದು ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವೇಳೆ ಬಂಧಿತನಾಗಿದ್ದ ತಾಹೀರ್ ಹುಸೇನ್ ಎಂಬಾತ ನೀಡಿದ್ದ ಮಾಹಿತಿ ಮೇರೆಗೆ ಮತ್ತೊಬ್ಬ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ವಿಜಯಪುರ ಮೂಲದ ಶಶಿಧರ್, ರವಿ ಬೆಳಗೆರೆ ಅವರು 30 ಲಕ್ಷ ರೂ. ಸುಪಾರಿ ನೀಡಿ ಸೂಚಿಸಿದ್ದರು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದರು.