ಕೊಡಗಿನಲ್ಲಿ ಭಾರೀ ಮಳೆ; ರೆಡ್ ಅಲರ್ಟ್ ಘೋಷಣೆ
ಆಗಸ್ಟ್ 5 ರಿಂದ 7ರ ವರೆಗೆ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಡಿಕೇರಿ: ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿ, ಜಲಾಶಯಗಳು ತುಂಬಿ ಹರಿಯುತ್ತಿದ್ದು, ಮುಂದಿನ ದಿನಗಳಲ್ಲಿಯೂ ಮಳೆ ಹೀಗೆ ಮುಂದುವರೆದರೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿರಾಜಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ರಸ್ತೆ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಆಗಸ್ಟ್ 5 ರಿಂದ 7ರ ವರೆಗೆ 115.6 ಮಿ.ಮೀ.ನಿಂದ 204.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಆಗಸ್ಟ್ 9 ರಿಂದ 10ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಸಹಾಯವಾಣಿಯನ್ನು ತೆರೆಯಲಾಗಿದ್ದು ಜಿಲ್ಲಾಡಳಿತ 24x7 ಕಂಟ್ರೋಲ್ ರೂಮ್‍ನ ದೂರವಾಣಿ ಸಂಖ್ಯೆ 08272-221077 ಅಥವಾ ವಾಟ್ಸಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.