ಬೆಂಗಳೂರು: ಬಸ್ ದರ ಏರಿಕೆ ಅನಿವಾರ್ಯತೆ ಕುರಿತಂತೆ ಸೂಕ್ತ ಸಮರ್ಥನೆಗಳೊಂದಿಗೆ ಮರು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. 
 
ಸೋಮವಾರ ನಡೆದ ಸಾರಿಗೆ ಇಲಾಖೆ ಮತ್ತು ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಎಂ ಕುಮಾರಸ್ವಾಮಿ, ಡಿಸೇಲ್ ಬೆಲೆ ಹೆಚ್ಚಾಗಿದ್ದರೂ, ಕಳೆದ ನಾಲ್ಕು ವರ್ಷಗಳಿಂದ ಬಸ್ ದರವನ್ನು ಹೆಚ್ಚಿಸದೇ ಇರುವ ಹಿನ್ನೆಲೆಯಲ್ಲಿ ಬಸ್ ದರವನ್ನು ಏರಿಸಬೇಕೆಂಬ ಸಾರಿಗೆ ಇಲಾಖೆ ಪ್ರಸ್ತಾವನೆಯ ಕುರಿತು ಸಭೆಯಲ್ಲಿ ಚರ್ಚಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.  
 
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತಷ್ಟು ಜನಸ್ನೇಹಿಯಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ ಸಿಎಂ, ಸಾರಿಗೆ ಇಲಾಖೆ ಮತ್ತು ಸಾರಿಗೆ ಸಂಸ್ಥೆಗಳನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಹಾಗೂ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕಲ್ ಬಸ್ ಗಳನ್ನು ಪರಿಚಯಿಸುವ ಕುರಿತು ವಿವರವಾದ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. 
 
ಗಾರ್ಮೆಂಟ್ ಕಾರ್ಖಾನೆ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಬಸ್ ಗಳನ್ನು ಬಳಸಿಕೊಳ್ಳಲು  ಕಾರ್ಮಿಕ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಕಾರ್ಮಿಕರು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸಲು ಬಸ್ ಪಾಸ್ ಗಳನ್ನು ರಿಯಾಯತಿ ದರದಲ್ಲಿ ನೀಡಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.  


COMMERCIAL BREAK
SCROLL TO CONTINUE READING

ಬಿ.ಎಂ.ಟಿ.ಸಿಯನ್ನು ಸಂಪೂರ್ಣ ಡಿಜಿಟಲಿಕರಣ ಮಾಡಲು ಕ್ರಮಕೈಗೊಳ್ಳಬೇಕಿದೆ ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎ.ಹ್ಯಾರಿಸ್ ತಿಳಿಸಿದರು.  ಹೊಸ ಬಸ್ ಖರೀದಿ, ಹೊಸ ಬಸ್ ನಿಲ್ದಾಣ / ಡಿಪೋಗಳ ನಿರ್ಮಾಣ ಮೊದಲಾದ ವಿಷಯಗಳ ಬಗ್ಗೆ ಈ ವೇಳೆ ಚರ್ಚಿಸಲಾಯಿತು. 
 
ಸಾರಿಗೆ ಸಚಿವ ಡಿ.ಸಿ.ತಮಣ್ಣ, ಉನ್ನತ ಶಿಕ್ಷಣ ಸಚಿವ ಜಿ ಟಿ. ದೇವೇಗೌಡ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ: ಬಿ.ಬಸವರಾಜು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ.ಸಿ.ಕಳಸದ್ ಉಪಸ್ಥಿತರಿದ್ದರು.