ಬೆಂಗಳೂರು: ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿದ್ದಾರೆ ಎಂದು ಆರೋಪಿಸಿ ಮಂಗಳವಾರ ರಾತ್ರಿ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆ ಬೆಂಗಳೂರಿನ ಕಾಲವ್ ಬೈರಸಂದ್ರದಲ್ಲಿ ನಡೆದಿದೆ. ಪೊಲೀಸ್ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದಾರೆ.




COMMERCIAL BREAK
SCROLL TO CONTINUE READING

ಶಾಸಕರ ಸೋದರಳಿಯ ನವೀನ್ ಫೇಸ್​ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ನೂರಾರು ಜನರು ನಗರದ ಕೆಜಿ ಹಳ್ಳಿ ಪೋಲೀಸ್ ಠಾಣೆ ಎದುರು ಜಮಾಯಿಸಿ ನವೀನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಶಾಸಕರು ಹಾಗೂ ಅವರ ಸಂಬಂಧಿ ನವೀನ್‌ ಮನೆ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಬೆಂಕಿ ಹಚ್ಚಿರುವ ಗುಂಪು ಪೊಲೀಸ್‌ ವಸತಿಗೃಹಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಲಾಗಿದೆ.



ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸೋದರ ಸಂಬಂಧಿ ಫೇಸ್ಬುಕ್ ನಲ್ಲಿ ತಮ್ಮ ಸಮುದಾಯದ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿರುವುದನ್ನು ವಿರೋಧಿಸಿ ಅಲ್ಪಸಂಖ್ಯಾತ ಸಮುದಾಯದವರು ನಡೆಸಿದ ಗಲಭೆಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೆ ಮೂವರು ಗಾಯಗೊಂಡಿದ್ದಾರೆ.



ಕೆಎಸ್‌ಆರ್ ಪಿ ವಾಹನಗಳಿಗೆ ಹಾಗೂ ಪೊಲೀಸ್ ಕ್ವಾಟ್ರಸ್ ಬಳಿ ಬೆಂಕಿ ಹಚ್ಚಿ ಸಾರ್ವಜನಿಕರ ಮನೆಗಳು,ವಾಹನ ಗಳಿಗೆ ಬೆಂಕಿ ಹಚ್ಚಿ ಹಾನಿಯನ್ನುಂಟು ಮಾಡುವ ಪ್ರಯತ್ನ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 



ಸ್ಥಳಕ್ಕೆ ಆಗಮಿಸಿ ಗಲಭೆಕೋರರನ್ನು ನಿಯಂತ್ರಿಸಲು ಮುಂದಾದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರ ಕೈಗೂ ಗಾಯವಾಗಿದೆ ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.


ಡಿ.ಜೆ. ಹಳ್ಳಿ ಮತ್ತು ಕೆ.ಜೆ. ಹಳ್ಳಿ ಬಳಿ ಮನೆಗಳಿಗೆ ಬೆಂಕಿ ಹಚ್ಚಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಘಟನೆಯಲ್ಲಿ ಎಸಿಪಿ, ಡಿಸಿಪಿ ಹಾಗೂ ಇನ್ಸ್ ಪೆಕ್ಟರ್ ಗಳಿಗೂ ಗಾಯಗಳಾಗಿದೆ.


ಬೇಕಾಬಿಟ್ಟಿ ಕಾನೂನು ಕೈಗೆತ್ತಿಕೊಂಡ್ರೆ ಕಠಿಣ ಕ್ರಮ:
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವಾದಿತ ಪೋಸ್ಟ್ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪೋಸ್ಟ್ ನೆಪದಲ್ಲಿ ಬೇಕಾಬಿಟ್ಟಿಯಾಗಿ ಕಾನೂನನ್ನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗಲಭೆಕೋರರಿಗೆ ಎಚ್ಚರಿಸಿದ್ದಾರೆ. ಜೊತೆಗೆ ಗಲಭೆ ಹತೋಟಿಗೆ ತರಲು ಪೊಲೀಸರಿಗೆ ಸಂಪೂರ್ಣ ಸ್ವತಂತ್ರ ನೀಡಲಾಗಿದೆ ಎಂದು ತಿಳಿಸಿದ್ದಾರೆ.