ವಿಧಾನಸೌಧದ `ವಜ್ರ ಮಹೋತ್ಸವ`ಕ್ಕೆ ಹತ್ತು ಕೋಟಿ ರೂ.
ವಿಧಾನಸೌಧ ವಜ್ರಮೋತ್ಸವಕ್ಕೆ 26 ಕೋಟಿ ರೂ. ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ...
ಬೆಂಗಳೂರು: ವಿಧಾನಸೌಧದ 'ವಜ್ರ ಮಹೋತ್ಸವ' ಹತ್ತು ಕೋಟಿ ರೂ. ವೆಚ್ಚದಲ್ಲಿ ಒಂದೇ ದಿನದಲ್ಲಿ ಮುಗಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಕರ್ ಕೆ.ಬಿ ಕೋಳಿವಾಡ ಮತ್ತು ಸಭಾಪತಿ ಡಿ.ಹೆಚ್.ಶಂಕರಮೂರ್ತಿಗೆ ಸೂಚನೆ ನೀಡಿದ್ದಾರೆ.
ವಿಧಾನ ಸಭಾಧ್ಯಕ್ಷರಾದ ಕೆ.ಬಿ. ಕೋಳಿವಾಡ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮಾತುಕತೆಯ ವೇಳೆ, ವಿಧಾನಸೌಧ ವಜ್ರಮೋತ್ಸವಕ್ಕೆ 26 ಕೋಟಿ ಪ್ರಸ್ತಾವನೆ ಸಲ್ಲಿಸಿದರು. ವಿಧಾನಸೌಧ ವಜ್ರಮೋತ್ಸವಕ್ಕೆ 26 ಕೋಟಿ ರೂ. ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ ಮುಖ್ಯಮಂತ್ರಿಗಳು, ಇದೇ ಮೊದಲ ಬಾರಿಗೆ ಸ್ಪೀಕರ್ ಮತ್ತು ಸಭಾಪತಿಗಳ ಮೇಲೆ ಕೆಂಡಾಮಂಡಲರಾದರು. ವಜ್ರಮಹೋತ್ಸವಕ್ಕೆ 26 ಕೋಟಿ ತೆಗೆದುಕೊಂಡು ಏನು ಮಾಡುತ್ತೀರಾ? ಎಂದು ಸ್ಪೀಕರ್ ಗೆ ಪ್ರಶ್ನೆ ಹಾಕಿದರು. ಖರ್ಚು- ವೆಚ್ಚದ ವಿವರ ನೀಡಲು ಮುಂದಾದ ಸ್ಪೀಕರ್ ಕೆ.ಬಿ ಕೋಳಿವಾಡರ ಮಾತನ್ನು ಆಲಿಸದ ಸಿಎಂ ನನಗೆ ಯಾವ ವಿವರವನ್ನು ನೀಡುವುದು ಬೇಡ ಎಂದು, 'ವಜ್ರ ಮಹೋತ್ಸವ'ವನ್ನು ಹತ್ತು ಕೋಟಿ ರೂ. ವೆಚ್ಚದಲ್ಲಿ ಒಂದೇ ದಿನದಲ್ಲಿ ಮುಗಿಸಬೇಕೆಂದು ಸೂಚನೆ ನೀಡಿದರು.
ಸಿ.ಎಂ ಮಾತಿಗೆ ಮರು ಪ್ರಶ್ನೆ ಹಾಕದೇ ಎಲ್ಲವನ್ನೂ ಒಪ್ಪಿಕೊಂಡ ಸ್ಪೀಕರ್ ಕೆ.ಬಿ ಕೋಳಿವಾಡ ಮತ್ತು ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಸಿಎಂ ಗೃಹ ಕಚೇರಿಯಿಂದ ನಿರ್ಗಮಿಸಿದರು.
ಇತ್ತೀಚೆಗಷ್ಟೇ ಶಾಸಕರಿಗೆ ಚಿನ್ನದ ಬಿಸ್ಕತ್, ನೌಕರರಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಟೀಕೆಗೆ ಗುರಿಯಾಗಿತ್ತು.
ವಜ್ರ ಮಹೋತ್ಸವಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ, ನಿಗದಿಯಂತೆ ವಜ್ರ ಮಹೋತ್ಸವ ನಡೆಯುತ್ತದೆ ಎಂದು ಸಿಎಂ ಭೇಟಿ ಬಳಿಕ ಸ್ಪೀಕರ್ ಕೋಳಿವಾಡ ಹೇಳಿಕೆ ನೀಡಿದ್ದಾರೆ.