ದಕ್ಷಿಣ ಕನ್ನಡ : ಹಾಲಿ ಸಚಿವ ಎಸ್. ಅಂಗಾರರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ‌ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹಿರಿಯ ಮುಖಂಡ ವೆಂಕಟ್ ವಳಲಂಬೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಜೊತೆಗೆ ಪುತ್ತೂರು ಬಿಜೆಪಿ ಅಭ್ಯರ್ಥಿ ಬಗ್ಗೆ ಸ್ವಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದ್ದು ಭಿನ್ನಮತಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದ ರೀತಿ ದುಡಿದ ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುವ ಎಸ್.ಅಂಗಾರರಂತಹ ಪ್ರಾಮಾಣಿಕ ನಾಯಕನ ಜೊತೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿರುತ್ತದೆ. ಆದುದರಿಂದ ನನ್ನ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಈ ಕ್ಷಣದಿಂದಲೇ ರಾಜೀನಾಮೆ ನೀಡಿರುತ್ತೇನೆ ಎಂದು ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡುಬಿದ್ರೆ ಇವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ವೆಂಕಟ್ ವಳಲಂಬೆ ತಿಳಿಸಿದ್ದಾರೆ‌.


ಇದನ್ನೂ ಓದಿ: ಬಿಜೆಪಿ ಮೊದಲ ಪಟ್ಟಿಯೇ ಗೆಲುವಿಗೆ ದಿಕ್ಸೂಚಿ: ಸಿಎಂ ಬೊಮ್ಮಾಯಿ


ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆಗೆ ಟಿಕೆಟ್‌ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಿಜೆಪಿ ಪಕ್ಷದ ಪ್ರಮುಖ ಗೆಲುವಿನ ಕ್ಷೇತ್ರ. ಈವರೆಗೆ ಶಾಸಕರಾಗಿ ಸಚಿವರಾಗಿದ್ದ ಎಸ್.ಅಂಗಾರರಿಗೆ ಈ ಸಲದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದೆ. ಈ ಸಲ ಅಂಗಾರರ ಬದಲಿಗೆ ಬೇರೆ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂಬ ಆಗ್ರಹ ಕೂಡಾ ಕೇಳಿಬಂದಿತ್ತು. ಇದೀಗ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಲಾಗಿದೆ.


ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಶಾಂತಿನಗರ ಮುರುಳ್ಯದ ದಿ.ಗುರುವ ಮತ್ತು ದಿ.ಕೊರಗ್ಗು ದಂಪತಿಯ ಪುತ್ರಿ ಭಾಗೀರಥಿ ಮುರುಳ್ಯ ಅವರು ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದಾರೆ. ಪ್ರಸ್ತುತ ಹೈನುಗಾರಿಕೆ, ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಮೊದಲಿಗೆ ಬೀಡಿ ಕಾರ್ಮಿಕೆಯಾಗಿ, ಗೌರವ ಶಿಕ್ಷಕಿಯಾಗಿಯೂ ದುಡಿದಿದ್ದಾರೆ. ರಾಷ್ಟ್ರಸೇವಿಕಾ ಸಮಿತಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಭಾಗೀರಥಿ ಅವರು ರಾಷ್ಟ್ರ ಸೇವಿಕ ಸಮಿತಿ ಸದಸ್ಯೆಯಾಗಿ, ಮತ್ತಿತರವಾಗಿ ತೊಡಗಿಸಿಕೊಂಡಿದ್ದಾರೆ. 


ಇದನ್ನೂ ಓದಿ: ಸೋಮಣ್ಣಗೆ ಡಬಲ್ ಹೊಣೆ: ಸಿದ್ದು ಮಣಿಸುವ ಜೊತೆಗೆ ಚಾಮರಾಜನಗರದಲ್ಲಿ ಅರಳಬೇಕಿದೆ ಕಮಲ


ಬಿಜೆಪಿಯಿಂದ ಸ್ಪರ್ಧಿಸಿ ಎಣ್ಮೂರು ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ, ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆಯಾಗಿ ದುಡಿದಿದ್ದಾರೆ. ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯೆಯಾಗಿ, ದ.ಕ.ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ, ಬಿಜೆಪಿ ಪುತ್ತೂರು ಮಂಡಲ ಸಹಪ್ರಭಾರಿಯಾಗಿ, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಉಪಾಧ್ಯಕ್ಷೆಯಾಗಿ ಉಡುಪಿ, ದ.ಕ. ಸಹಪ್ರಭಾರಿಯಾಗಿ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆಯಾಗಿ, ಬೆಳ್ತಂಗಡಿ ಮಂಡಲ ಸಹಪ್ರಭಾರಿಯಾಗಿದ್ದಾರೆ. ಪ್ರಸ್ತುತ ರಾಜ್ಯ ಬಿಜೆಪಿ ಮಹಿಳಾ ಮೋರ್ಚದ ಕಾರ್ಯಕಾರಿಣಿ ಸದಸ್ಯೆಯಾಗಿ, ಕೊಡಗು ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಹಕಾರಿ ಸಂಘಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲೂ, ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.


ಮೂವರು ಹೊಸ ಮುಖಗಳಿಗೆ ಟಿಕೆಟ್ : ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ಸುಳ್ಯದಿಂದ ಸಚಿವ ಅಂಗಾರ ಅವರನ್ನು ಕೈ ಬಿಟ್ಟು ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಮಂಗಳೂರು ( ಉಳ್ಳಾಲ ) ಟಿಕೆಟ್ ಮಾಜಿ ಜಿ.ಪಂ. ಸದಸ್ಯ ಸತೀಶ್ ಕುಂಪಲ ಅವರಿಗೆ ಸಿಕ್ಕಿದೆ. ಪುತ್ತೂರು ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಬಿಟ್ಟು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ‌ಉಳಿದಂತೆ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಮಂಗಳೂರು ದಕ್ಷಿಣದಿಂದ ವೇದವ್ಯಾಸ ಕಾಮತ್, ಮಂಗಳೂರು ಉತ್ತರದಿಂದ ಡಾ. ಭರತ್ ಶೆಟ್ಟಿ , ಬಂಟ್ವಾಳದಿಂದ ರಾಜೇಶ್ ನಾಯ್ಕ್, ಮೂಡುಬಿದಿರೆಯಿಂದ ಉಮಾನಾಥ್ ಕೋಟ್ಯಾನ್, ಬೆಳ್ತಂಗಡಿಯಿಂದ ಹರೀಶ್ ಪೂಂಜಾ ಮತ್ತೆ ಬಿಜೆಪಿ ಅಭ್ಯರ್ಥಿಗಳಾಗಲಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.