ಬೆಂಗಳೂರು: ಈ ಮೊದಲು ತಮ್ಮನ್ನು ಮಾರಿಕೊಳ್ಳುವುದಿಲ್ಲ ಎಂದು ತಿಳಿಸಿದ್ದ ಜೆಡಿಎಸ್​ ಮಾಜಿ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಅವರು ಇಂದು ಅತೃಪ್ತ ಶಾಸಕರ ಜತೆ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ವಿಶ್ವನಾಥ್​ ಅವರು ಈಗ ಎಷ್ಟಕ್ಕೆ ಮಾರಾಟವಾಗಿದ್ದಾರೆ ಎಂಬುದು ಸದನಕ್ಕೆ ತಿಳಿಯಬೇಕಿದೆ ಎಂದು ಸದನದಲ್ಲಿಂದು ಎಚ್.ವಿಶ್ವನಾಥ್​ ವಿರುದ್ಧ ಸಚಿವ ಸಾ.ರಾ. ಮಹೇಶ್​ ತೀವ್ರ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಈ ಕುರಿತು ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹಿರಿಯ ರಾಜಕಾರಣಿ ಎಚ್. ವಿಶ್ವನಾಥ್, ಸಾ.ರಾ. ಮಹೇಶ್ ಈಸ್ ವೆರಿ ಪಾಯ್ಸನಸ್! ಯಾರನ್ನು ಬೇಕಾದರೂ ಹಾಳು ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.


ಸಾ.ರಾ. ಮಹೇಶ್ ಆರೋಪ ಸುಳ್ಳು:
ಖಾಸಗಿ ಮಾಧ್ಯಮದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಎಚ್.ವಿಶ್ವನಾಥ್, ಸಾ.ರಾ. ಮಹೇಶ್ ಮಾಡಿರುವ ಆರೋಪಗಳು ಸುಳ್ಳು. ಈ ಹಿಂದೆ ಸಾ.ರಾ. ಮಹೇಶ್ ಅವರು ಪತ್ರಕರ್ತರೊಬ್ಬರಿಂದ  ನನ್ನ ಮೇಲೆ ಇದೇ ರೀತಿಯ ಆರೋಪ ಹೋರಿಸಿದ್ದರು. 


ನಾನು ಹಿಂದುಳಿದ ವರ್ಗದಿಂದ ಬಂದವನು. ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ ಇಂದು ನನ್ನ ಮೇಲೆ ಈ ರೀತಿ ಆರೋಪ ಮಾಡಿರುವುದು ನಿಜಕ್ಕೂ ಸುಳ್ಳು. ನಾನು ಅವರ ತೋಟಕ್ಕೆ ಹೋಗಿದ್ದು ಎಲ್ಲ ನಿಜ. ಸಾಲದ ಬಗ್ಗೆ ಹೇಳಿರುವುದೂ ನಿಜ. ಆದರೆ, ಸಾಲ ತೀರಿಸಲು ನನ್ನನ್ನು ಅಡ ಇಟ್ಟಿಕೊಳ್ಳುವ ಜಾಯಮಾನ ನನ್ನದಲ್ಲ. 


ಸಾ.ರಾ. ಮಹೇಶ್ ಈಸ್ ವೆರಿ ಪಾಯ್ಸನಸ್... ಯಾರನ್ನು ಬೇಕಾದರೂ ಹಾಳು ಮಾಡ್ತಾರೆ. ರಾಜ್ಯದ ಜನರನ್ನು ನಂಬಿಸಲು ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡುವ ಮನುಷ್ಯ ಈತ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಒಬ್ಬ ಸದಸ್ಯ ಈಗ ತಂದೆ ತಾಯಿ ಮೇಲೆ ಆಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.


ನನಗೆ ಅಷ್ಟೊಂದು ಸಾಲ ಇಲ್ಲ:
ನಾನು ಸಾಲ ಮಾಡಿರುವುದು ಸತ್ಯ. ಆದರೆ ನನಗೆ 27, 28 ಕೋಟಿ ರೂ.ಗಳಷ್ಟು ಸಾಲ ಇಲ್ಲ. ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಸಾಲ ಮಾಡಿಕೊ ನಾನು ಕೊಡ್ತೀನಿ ಅಂದಿದ್ರು. ಆದರೆ ಹಾಗಂತ ನಾನು ನನ್ನನ್ನು ಯಾರಿಗೂ ಅಡ ಇಟ್ಟುಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.


ನನ್ನ ತೇಜೋವಧೆಗೆ ಅವಕಾಶ ನೀಡಲಾಗಿದೆ:
ಇವತ್ತು ಸದನದಲ್ಲಿ ನನ್ನ ಗೈರು ಹಾಜರಿಯಲ್ಲಿ ಸಚಿವ ಸಾ.ರಾ. ಮಹೇಶ್ ಅವರು ನನ್ನ ಮೇಲೆ ಆಪಾದನೆ ಮಾಡಿದ್ದಾರೆ. ಗೈರು ಹಾಜರಾದ ಸದಸ್ಯರ ಅನುಪಸ್ಥಿತಿಯಲ್ಲಿ ಅವರ ಮೇಲಿನ ಚರ್ಚೆಗೆ ಸ್ಪೀಕರ್ ಅವಕಾಶ ನೀಡುವಂತಿಲ್ಲ. ಆದರೆ ಸ್ಪೀಕರ್ ಅವರು ಇಂದು ನನ್ನ ತೇಜೋವಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.