ಬೆಂಗಳೂರು: ತುಮಕೂರಿನಲ್ಲಿ ನಡೆಸಲಾದ ಅಲ್ಪಸಂಖ್ಯಾತರ ಸಮಾವೇಶ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎಸ್ಸಿ-ಎಸ್ಟಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮುಂದಿನ ಚುನಾವಣೆಗೆ ಪಕ್ಷ ಸದೃಢಗೊಳಿಸಲು ಈ ಸಮಾವೇಶ ಮತ್ತು ರ್ಯಾಲಿಗಳನ್ನು  ಮಾಡುತ್ತಿದ್ದೇವೆ ಎಂದು ತಿಳಿಸಿದ ಎಚ್ಡಿಕೆ ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಮಹಿಳಾ ಸಮಾವೇಶ, ಯುವ ಸಮಾವೇಶ,  ರೈತರ ಸಮಾವೇಶ ಹಾಗೂ ಹಿಂದುಳಿದವರ್ಗಗಳ ಸಮಾವೇಶ ಮಾಡುವ ಉದ್ದೇಶ ಇದೆ ಎಂದು ವಿವರಿಸಿದರು. ಜೊತೆಗೆ ಜೆಡಿಎಸ್ ವೈಯಕ್ತಿಕ ವಿಚಾರಕ್ಕಿಂತ ಹೆಚ್ಚಾಗಿ, ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿದೆ ಎಂದು ಹೇಳಿದರು.


ಹೊನ್ನಾವರದ ಘರ್ಷಣೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜನವರಿ 9.ರಂದು ಮಂಗಳೂರಿನಲ್ಲಿ ಸೌಹಾರ್ದ ನಡಿಗೆ ಮಾಡುತ್ತೇವೆ. ಸಣ್ಣಪುಟ್ಟ ಘರ್ಷಣೆಗಳನ್ನೇ ದೊಡ್ಡದು ಮಾಡಿ, ಅಮಾಯಕರ ಬಲಿತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.


ಘರ್ಷಣೆಯ ಬಗ್ಗೆ ಮುಂದುವರೆದು ಮಾತನಾಡಿದ ಎಚ್ಡಿಕೆ, ರಾಷ್ಟ್ರೀಯ ಪಕ್ಷಗಳಿಂದಲೇ ಈ ಘರ್ಷಣೆ ಆಗುತ್ತಿದೆ.  ಹೊನ್ನಾವರದಲ್ಲಿ ಆದ ಸಣ್ಣ ಅಪಘಾತವನ್ನೇ ದೊಡ್ಡದು ಮಾಡಿದ್ದಾರೆ. ಜನರಲ್ಲಿ ಭಯಹುಟ್ಟಿಸುವಂತ ವಾತಾವರಣ ಸೃಷ್ಟಿಸಿದ್ದಾರೆ. ಇದು ರಾಷ್ಟ್ರೀಯ ಪಕ್ಷಗಳ ಹುನ್ನಾರ,  ಹಿಂದು ಮತ್ತು ಮುಸ್ಲಿಮರು ಈ ಚಿತಾವಣೆಗೆ ಬಲಿಯಾಗಬಾರದು. ಶಾಲಾ ಮಕ್ಕಳನ್ನೇ ಬಿಜೆಪಿ ತನ್ನ ಪ್ರತಿಭಟನೆಗೆ ಕರೆತರುತ್ತಿದೆ. ಯಾವ ಕಾರಣಕ್ಕೆ ಹೊನ್ನಾವರದಲ್ಲಿ ಯುವಕ ಮೃತಪಟ್ಟ ಎಂದು ಗೊತ್ತಿಲ್ಲ, ಸಂಸದರೂ ಹೋಗಿ ಅಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.