ಬಂದ್ ಹಿನ್ನೆಲೆ: ರಾಮನಗರದಲ್ಲಿ ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ನಾಳೆಯೂ ರಾಮನಗರ ಬಂದ್ ಗೆ ಕರೆ ನೀಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸೆ.5ರಂದೂ ಸಹ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ರಾಮನಗರ: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದಿಂದಾಗಿ ಇಡೀ ರಾಮನಗರ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
"ಶಿವಕುಮಾರಣ್ಣ ಯಾವ ತಪ್ಪೂ ಮಾಡಿಲ್ಲ, ಆದರೂ ಅವರನ್ನು ಬಂಧಿಸಿದ್ದಾರೆ. ವಿನಾ ಕಾರಣ ಅವರನ್ನು ಬಂಧಿಸಿರುವ ಅಧಿಕಾರಿಗಳಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ನಮ್ಮಣ್ಣ ಇಲ್ಲದೆ ನಾವೆಲ್ಲಾ ತಬ್ಬಲಿಗಳಾಗಿದ್ದೇವೆ. ಆದಷ್ಟು ಬೇಕ ಡಿಕೆಶಿ ಅಣ್ಣ ಹೊರಬರಬೇಕು" ಎಂದು ಡಿಕೆಶಿ ಬೆಂಬಲಿಗರು, ಅಭಿಮಾನಿಗಳು ಅಸಮಾಧಾನ ಹೊರಹಾಕಿದರು.
ಬೆಂಗಳೂರು-ಮೈಸೂರು ಹೆದ್ದಾರಿ, ಕನಕಪುರ-ರಾಮನಗರ ಮಾರ್ಗದಲ್ಲಿಯೂ ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಹಲವು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಟೈರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಸಿದರಲ್ಲದೆ, ಜಾರಿ ನಿರ್ದೇಶನಾಲಯ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕೆಲವು ಪ್ರತಿಭಟನಾಕಾರನನ್ನು ಬಂಧಿಸಿದ ಪೊಲೀಸರು ಕೆಲಸ ಸಮಯದ ಬಳಿಕ ಬಿಡುಗಡೆ ಮಾಡಿದರು.
ಡಿಕೆಶಿ ಬಂಧನ ವಿರೋಧಿಸಿ ನಡೆಸಲಾದ ಪ್ರತಿಭಟನೆಯ ಕಿಚ್ಚು ನಾಳೆಗೂ ಮುಂದುವರೆಯಲಿದ್ದು, ನಾಳೆಯೂ ರಾಮನಗರ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೆ.5ರಂದೂ ಸಹ ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.