ದ್ವಿತೀಯ ಪಿಯು ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಮೇಲುಗೈ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣಕನ್ನಡ ಪ್ರಥಮ ಸ್ಥಾನ, ಚಿಕ್ಕೋಡಿ ಕೊನೆಯ ಸ್ಥಾನ ಗಳಿಸಿದೆ.
ಬೆಂಗಳೂರು: 2017-18ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು(ಸೋಮವಾರ) ಬೆಳಿಗ್ಗೆ 11 ಗಂಟೆಗೆ ವೆಬ್ಸೈಟ್ ನಲ್ಲಿ ಪ್ರಕಟಗೊಂಡಿದೆ. ಈ ಬಾರಿಯ ಪರೀಕ್ಷೆಯಲ್ಲಿ ಶೇ. 59.56ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮೇ.1ರಂದು ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ಈ ಬಾರಿಯ ಫಲಿತಾಂಶದಲ್ಲಿ ದಕ್ಷಿಣ ಕನ್ನಡ 91.49% ಪಡೆಯುವುದರ ಮೂಲಕ ಅಗ್ರಸ್ಥಾನ ಗಳಿಸಿದ್ದು,
ಚಿಕ್ಕೋಡಿ 52.20% ನೊಂದಿಗೆ ಕೊನೆ ಸ್ಥಾನ ಪಡೆದಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.
ಮಾರ್ಚ್ 1 ರಿಂದ 17ರವರೆಗೆ ರಾಜ್ಯಾದ್ಯಂತ 2,817 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 6,90,150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಒಟ್ಟು 4, 08, 421 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಶೇ.67.11 ರಷ್ಟು ತೇರ್ಗಡೆಯಾಗಿದ್ದು, ಬಾಲಕರು ಶೇ.52.30ರಷ್ಟು ಉತ್ತೀರ್ಣರಾಗಿದ್ದಾರೆ.
ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆಯಲು, ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕಾಗಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮಂಡಳಿ ಹೇಳಿದೆ.
ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮೇ 14 ಕೊನೆಯ ದಿನವಾಗಿದೆ. ಜೂನ್ 6ರಿಂದ ಜೂನ್ 20ರ ವರೆಗೆ ಪೂರಕ ಪರೀಕ್ಷೆ ನಡೆಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಇಲಾಖೆಯ ವೆಬ್ಸೈಟ್ www.puc.kar.nic.in ಮತ್ತು http://karresults.nic.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಬಹುದು.
ಎಸ್ಎಂಎಸ್ ಮೂಲಕ ಫಲಿತಾಂಶ: ಮೊಬೈಲ್‌ನಲ್ಲಿ KAR12 ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು ರೋಲ್ ನಂಬರ್ ನಮೂದಿಸಿ 56263ಗೆ ಸಂದೇಶ ಕಳುಹಿಸುವ ಮೂಲಕ ವಿದ್ಯಾರ್ಥಿಗಳು ಎಸ್ಎಂಎಸ್ ಮೂಲಕವೂ ಫಲಿತಾಂಶ ತಿಳಿಯಬಹುದು.