ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ
ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ಚಿತ್ರದುರ್ಗ ಕೊನೆಯ ಸ್ಥಾನ ಪಡೆದಿದೆ.
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 92.20 ಅಂಕಗಳೊಂದಿಗೆ ಉಡುಪಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದ್ದರೆ, ಶೇ.90.91 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ, ಶೇ. 83.31 ಫಲಿತಾಂಶ ಪಡೆದು ಕೊಡಗು ಜಿಲ್ಲೆ ತೃತೀಯ ಸ್ಥಾನ ಗಳಿಸಿದ್ದರೆ, ಶೇ.51.42 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ಸೋಮವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದ್ದು ಮಧ್ಯಾಹ್ನ 12 ಗಂಟೆ ಬಳಿಕ ಇಲಾಖೆಯ ವೆಬ್ಸೈಟ್ www.puc.kar.nic.in ಮತ್ತು http://karresults.nic.in ನಲ್ಲಿ ಫಲಿತಾಂಶ ನೋಡಬಹುದಾಗಿದೆ. ನಾಳೆ ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುವುದು.
ಪ್ರಸಕ್ತ ಸಾಲಿನಲ್ಲಿ 6,71,653 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,14,587 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮಾರ್ಚ್ 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಭಾವಚಿತ್ರದಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಇಲಾಖೆ on-line portal ತೆರೆದಿದ್ದು, 16-04-2019 ರಿಂದ 30-04-2019ರವರೆಗೆ ನ್ಯೂನ್ಯತೆ ಸರಿಪಡಿಸಲು ಇಲಾಖೆ ವತಿಯಿಂದ ಅನುವುಮಾಡಿಕೊಡಲಾಗಿದೆ.
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಮತ್ತು ಮರು ಮೌಲ್ಯಮಾಪನ:
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು 17-04-2019 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, 29-04-2019 ಕೊನೆ ದಿನವಾಗಿದೆ.
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು 27-04-2019 ಪ್ರಾರಂಭದ ದಿನವಾಗಿದ್ದು, 06-05-2019 ಕಡೆ ದಿನವಾಗಿದೆ.
ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು 29-04-2019 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು 08-05-2019 ಕೊನೆ ದಿನವಾಗಿದೆ.
- ಸ್ಕ್ಯಾನಿಂಗ್ ಪ್ರತಿ ಪಡೆಯಲು ಶುಲ್ಕ(ಪ್ರತಿ ವಿಷಯಕ್ಕೆ) - 530 ರೂ.
- ಮರು ಮೌಲ್ಯಮಾಪನಕ್ಕಾಗಿ ಶುಲ್ಕ(ಪ್ರತಿ ವಿಷಯಕ್ಕೆ) - 1,670 ರೂ.