ಜಾತ್ಯಾತೀತ ಬುದ್ಧಿಜೀವಿಗಳಿಗೆ ಜೀವಂತ ಮನುಷ್ಯ ಮತ್ತು ಶವದ ವ್ಯತ್ಯಾಸ ತಿಳಿದಿಲ್ಲ: ಅನಂತ್ ಕುಮಾರ್ ಹೆಗಡೆ
ಜಾತ್ಯಾತೀತ ಬುದ್ಧಿಜೀವಿಗಳಿಗೆ ಜೀವಂತ ಮಾನವರು ಮತ್ತು ಮೃತದೇಹಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಧಾರವಾಡ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು, ಈ ಬಾರಿ ಬುದ್ಧಿಜೀವಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿ ಗುರುವಾರ ನಡೆದ ಸ್ಕಿಲ್ ಆನ್ ವ್ಹಿಲ್ಸ್ ಕಾರ್ಯಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಬುದ್ಧಿಜೀವಿಗಳು ಎಂದು ಗುರುತಿಸಿಕೊಂಡವರಿಗೆ 'ಅಂತರಾತ್ಮ' ಎಂದರೇನು ಎಂಬ ಅರಿವಿಲ್ಲ. ಅವರಿಗೆ ಜೀವಂತ ಮಾನವ ಮತ್ತು ಶವಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಮಾನವ ದೇಹದ ತೃಷೆಗಳನ್ನು ಈಡೇರಿಸಿಕೊಳ್ಳುವುದಷ್ಟೆ ಜೀವನ ಎಂದು ತಿಳಿದಿದ್ದಾರೆ" ಎಂದು ಛೇಡಿಸಿದರು.
ಇತ್ತೀಚೆಗಷ್ಟೇ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ವಿಪಕ್ಷಗಳನ್ನು ಕಾಗೆ, ನರಿ, ಕೋತಿಗಳಿಗೆ ಹೋಲಿಸಿ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇದೀಗ ಬುದ್ಧಿಜೀವಿಗಳಿಗೆ ಜೀವನ ಎಂದರೇನು ಎಂಬುದೇ ಗೊತ್ತಿಲ್ಲ ಎನ್ನುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.