ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಇನ್ನಿಲ್ಲ
ಮೈಸೂರು : ಕನ್ನಡ ಪತ್ರಿಕೋದ್ಯಮದ ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೈಸೂರಿನ ಆಂದೋಲನ ದಿನಪತ್ರಿಕೆ ಸಂಪಾದಕರಾಗಿದ್ದ ಕೋಟಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಪತ್ನಿ, ಒಬ್ಬ ಪುತ್ರ ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಹಿಂದಿರುಗುವ ಸಮಯದಲ್ಲಿ ಹೃದಯಾಘಾತವಾಗಿದೆ. ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಯಿತಾದರೂ ಫಲಕಾರಿಯಾಗದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಮಾಜವಾದದ ಮೂಲಕ ಸಮ ಸಮಾಜ ನಿರ್ಮಾಣದ ಧ್ಯೇಯವನ್ನು ಹೊತ್ತು, ದಿಟ್ಟ ಹಾಗೂ ನೇರ ಸುದ್ದಿಗಳನ್ನು ನೀಡುತ್ತಾ ದೊಡ್ಡ ಕ್ರಾಂತಿಯನ್ನೇ ಮಾಡಿದ ಮೈಸೂರಿನ `ಆಂದೋಲನ' ದಿನಪತ್ರಿಕೆಯ ಸಂಸ್ಥಾಪಕರಾಗಿ, ಸಂಪಾದಕರಾಗಿ 4 ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರು.
ಮೂಲತಃ ಗದಗ ಜಿಲ್ಲೆಯ ಹುಯಿಳಗೋಳದವರಾದ ಕೋಟಿ ಜಮೀನ್ದಾರ ಮನೆತನಕ್ಕೆ ಸೇರಿದವರು. ತಮ್ಮ ವಿದ್ಯಾಭಾಸದ ಸಮಯದಲ್ಲೇ ಒಂದು ಸಣ್ಣ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರುವ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟರು. ನಂತರ ಧಾರವಾಡದ ಪಾಟೀಲ ಪುಟ್ಟಪ್ಪ ಅವರ `ವಿಶ್ವ ವಾಣಿ' ಪತ್ರಿಕೆಯಲ್ಲಿ ವರದಿಗಾರರಾಗಿ, `ಪ್ರಪಂಚ' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ ಅವರು ನಂತರ 1972ರಲ್ಲಿ ಮೈಸೂರಿಗೆ ಬಂದು `ಆಂದೋಲನ' ಪತ್ರಿಕೆಯನ್ನು ಆರಂಭಿಸಿದರು.
ಆರಂಭದಲ್ಲಿ ವಾರಪತ್ರಿಕೆಯಾಗಿ ಪ್ರಕಟವಾಗುತ್ತಿದ್ದ `ಆಂದೋಲನ' ಪತ್ರಿಕೆ ಜನಮಾನಸದಲ್ಲಿ ಬಹಳಷ್ಟು ಹೆಸರು ಮಾಡಿತು. ನಂತರದ ದಿನಗಳಲ್ಲಿ ದಿನಪತ್ರಿಕೆಯಾಗಿ ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡುವುದರೊಂದಿಗೆ, ಮೈಸೂರು ಸೇರಿದಂತೆ ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಗಳಿಗೆ ಪತ್ರಿಕಾ ಪ್ರಸರಣವನ್ನು ವಿಸ್ತರಿಸಿತು. ಆರಂಭದಲ್ಲಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿದ್ದ `ಆಂದೋಲನ' ಈಗ 12 ಪುಟಗಳೊಂದಿಗೆ ಪ್ರಕಟವಾಗುತ್ತಿದೆ. ರಾಜ್ಯ ಪತ್ರಿಕೆಗಳ ಪೈಪೋಟಿಯ ನಡುವೆಯೂ `ಆಂದೋಲನ'ವನ್ನು ಪ್ರತಿಷ್ಠಿತ ಮತ್ತು ಜನಪ್ರಿಯ, ಜನಪರ ಪತ್ರಿಕೆಯಾಗಿ ರಾಜಶೇಖರ ಕೋಟಿ ಅವರು ಉಳಿಸಿಕೊಂಡು ಬಂದಿದ್ದರು.
ಸಮಾಜವಾದದ ಪ್ರತಿಪಾದಕರೂ, ಪ್ರಗತಿಪರ ಚಿಂತಕರು, ಸರಳ ಜೀವಿಯೂ, ಸಹಕಾರಿಯೂ ಆಗಿ ಪತ್ರಿಕೋದ್ಯಮದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ರಾಜಶೇಖರ ಕೋಟಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಟಿಎಸ್ಆರ್ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ಮುರಾಘಾಶ್ರೀ ಪ್ರಶಸ್ತಿ, ಜನಮಿತ್ರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.