ಬರಹಗಳ ಮೂಲಕವೇ ಬೆರಗು ಮೂಡಿಸಿದ್ದ `ಅಕ್ಷರ ಮಾಂತ್ರಿಕ` ರವಿ ಬೆಳಗೆರೆ ಇನ್ನಿಲ್ಲ
`ಹಾಯ್ ಬೆಂಗಳೂರ್` ಪತ್ರಿಕೆ ಆರಂಭಿಸಿ ಸಂಚಲನವನ್ನೇ ಸೃಷ್ಟಿಸಿದ್ದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ರಾತ್ರಿ 1 ಗಂಟೆ ಸುಮಾರಿಗೆ ತನ್ನ ಕಚೇರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು: ತಮ್ಮ ಬರಹಗಳ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ 'ಅಕ್ಷರ ಮಾಂತ್ರಿಕ' ಎಂದೇ ಖ್ಯಾತಿ ಪಡೆದಿದ್ದ ಖ್ಯಾತ ಪತ್ರಕರ್ತ, ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ (62) ತಡರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ರಾತ್ರಿ ಊಟ ಮುಗಿಸಿದ ಬಳಿಕ ಪದ್ಮನಾಭನಗರದ ತನ್ನ ಹಾಯ್ ಬೆಂಗಳೂರು (Hai Bangalore) ಕಚೇರಿಯಲ್ಲೇ ಇದ್ದ ರವಿ ಬೆಳಗೆರೆ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ಸದ್ಯ ಕನಕಪುರ ಮುಖ್ಯ ರಸ್ತೆಯ ಗುಬ್ಳಾಳದ ಕರಿಶ್ಮಾ ಹಿಲ್ಸ್ ನ ಅವರ ನಿವಾಸದಲ್ಲಿ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದ್ದು ಬೆಳಿಗ್ಗೆ 8 ಗಂಟೆಗೆ ಪದ್ಮನಾಭನಗರದ ಪ್ರಾರ್ಥನಾ ಶಾಲೆ ಆವರಣಕ್ಕೆ ಮೃತ ದೇಹ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ. ಅಲ್ಲಿ ರವಿ ಬೆಳಗೆರೆ (Ravi Belagere) ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಯವಿಲ್ಲದ ತನಿಖಾ ಪತ್ರಕರ್ತೆ: ಗೌರಿ ಲಂಕೇಶ್
ರವಿ ಬೆಳಗೆರೆಯವರು ಪತ್ನಿಯರಾದ ಲಲಿತಾ, ಯಶೋಮತಿ, ಮಕ್ಕಳಾದ ಚೇತನಾ, ಭಾವನಾ, ಕರ್ಣ ಹಾಗೂ ಹಿಮವಂತ ಸೇರಿ ಅಪಾರ ಬಂಧು-ಬಳಗ ಅಭಿಮಾನಿಗಳನ್ನೂ ಅಗಲಿದ್ದಾರೆ.
ರವಿ ಬೆಳಗೆರೆ 1958ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳಗೆರೆ ಬಳ್ಳಾರಿಯಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದ್ದರು. ಉಪನ್ಯಾಸಕರಾಗಿ ರವಿಬೆಳಗೆರೆ ವೃತ್ತಿ ಆರಂಭಿಸಿದ ಅವರು ಆನಂತರದಲ್ಲಿ ಉಪನ್ಯಾಸಕ ವೃತ್ತಿಯನ್ನು ಬಿಟ್ಟು ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಆರಂಭಿಸಿದರು. ಬಳಿಕ 1995ರಲ್ಲಿ ಹಾಯ್ ಬೆಂಗಳೂರು ವಾರ ಪತ್ರಿಕೆ ಆರಂಭಿಸುವ ಮೂಲಕ ತನಿಖಾ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದರು. ಅಲ್ಲದೆ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅಲ್ಲದೆ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿದ್ದ ರವಿ ಬೆಳಗೆರೆ ಮನೆ ಮಾತಾಗಿದ್ದರು.
ಭೀಮಾ ತೀರದ ಹಂತಕರು , ಪಾಪಿಗಳ ಲೋಕದಲ್ಲಿ , ನೀ ಹಿಂಗ ನೋಡಬ್ಯಾಡ ನನ್ನ, ಇಂದಿರೇ ಮಗ ಸಂಜಯ , ರಾಜ್ ಲೀಲಾ ವಿನೋದ ಸೇರಿದಂತೆ ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕ.