ಕಾರಾಗೃಹದಲ್ಲಿ ಶಶಿಕಲಾಗೆ ರಾಯಲ್ ಟ್ರೀಟ್ಮೆಂಟ್; ಆರ್ ಟಿ ಐ ನಿಂದ ಮಾಹಿತಿ ಬಹಿರಂಗ
ಜೈಲಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಈ ಹಿಂದೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಲಾಗಿತ್ತು.
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಲಾಗಿತ್ತು ಎಂಬ ವಿಚಾರ, ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.
ಜೈಲಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಈ ಹಿಂದೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಲಾಗಿತ್ತು. ವಿ.ಕೆ.ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದುದು ನಿಜ ಎಂಬುದು ಈ ಸಮಿತಿ ನೀಡಿರುವ ವರದಿಯಲ್ಲಿ ಈಗ ಆರ್.ಟಿ.ಐ. ಅಡಿಯಲ್ಲಿ ಬಹಿರಂಗವಾಗಿದೆ.
ತನಿಖಾ ಸಮಿತಿ ನೀಡಿರುವ ವರದಿ ಪ್ರಕಾರ, ಶಶಿಕಲಾಗಾಗಿ ಇಡೀ ಕಾರಿಡಾರ್ ಅನ್ನೇ ಖಾಲಿ ಮಾಡಿಸ ಲಾಗಿತ್ತು. ಅಷ್ಟೇ ಅಲ್ಲ, ಶಶಿಕಲಾ ಪ್ರತ್ಯೇಕ ವಾಗಿ ಅಡುಗೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಜೈಲಿನ ನಿಯಮ ಗಳನ್ನು ಉಲ್ಲಂಘಿಸಿ ಇತರ ಸೌಲಭ್ಯ ಗಳನ್ನೂ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.
ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ ಶಿಕ್ಷೆಗೊಳಗಾಗಿದ್ದು, ಇವರಿಬ್ಬರಿಗೇ ಜೈಲು ಅಧಿಕಾರಿಗಳು 5 ಸೆಲ್ ಗಳನ್ನು ನೀಡಿದ್ದರೆನ್ನಲಾಗಿದೆ. ಜೈಲಿನ ನಿಯಮಾವಳಿಗಳ ಪ್ರಕಾರ ಒಂದು ಸೆಲ್ ನಲ್ಲಿ 4 ಮಂದಿ ಕೈದಿಗಳನ್ನು ಇರಿಸಬಹುದಾಗಿದ್ದು, ಆದರೆ ಅಧಿಕಾರಿಗಳು ಈ ಇಬ್ಬರಿಗೆ ಒಟ್ಟು ಐದು ಸೆಲ್ ಗಳನ್ನು ನೀಡಿದ್ದು, ತನಿಖೆಯಲ್ಲಿ ಬಹಿರಂಗವಾಗಿದೆ.
ಅಲ್ಲದೆ ಶಶಿಕಲಾ ಹಾಗೂ ಇಳವರಸಿಗೆ ಪ್ರತ್ಯೇಕವಾಗಿ ಅಡುಗೆ ಮಾಡಿಕೊಡಲು ಮಹಿಳಾ ಖೈದಿಯೊಬ್ಬರನ್ನು ಅಕ್ರಮವಾಗಿ ನೇಮಿಸಲಾಗಿತ್ತು ಎಂಬ ಅಂಶವು ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೊತೆಗೆ ಶಶಿಕಲಾ ಕೆಲವೊಮ್ಮೆ ನಾಲ್ಕು ತಾಸುಗಳ ಕಾಲ ಸಂದರ್ಶಕರನ್ನು ಭೇಟಿಯಾಗಿರುವುದು ವರದಿ ಮೂಲಕ ಬಯಲಾಗಿದೆ.
ಈ ಹಿಂದೆ ಕಾರಾಗೃಹದ ಡಿಐಜಿ ಆಗಿದ್ದ ಡಿ. ರೂಪಾ 2017ರಲ್ಲಿಯೇ ಶಶಿಕಲಾ ಹಾಗೂ ಆಕೆಯ ಸಹಚರರಿಗೆ ಪ್ರತ್ಯೇಕವಾದ ಅಡುಗೆ ಮನೆ, ಹೆಚ್ಚುವರಿ ಕೊಠಡಿಗಳು ಹಾಗೂ ಸಂದರ್ಶಕರ ಅವಧಿ ವಿಸ್ತರಿಸುವ ಮೂಲಕ ವಿಶೇಷವಾಗಿ ಉಪಚರಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ಡಿಐಜಿ ರೂಪಾ ಪರಿಶೀಲನೆಗೆ ಆಗಮಿಸಿದ್ದಾಗ ಅಡುಗೆ ಮಾಡಲು ಬಳಸುವ ಪಾತ್ರೆಗಳು, ಪ್ರಶರ್ ಕುಕ್ಕರ್ ಕೂಡ ಕಂಡುಬಂದಿದೆ ಎಂದು ಹೇಳಿದ್ದರು. ಇದನ್ನೂ ವಿನಯ ಕುಮಾರ್ ಸಮ್ಮತಿಸಿದ್ದು, ಶಶಿಕಲಾಗೆ ಉನ್ನತ ದರ್ಜೆಯ ಸೌಲಭ್ಯ ಒದಗಿಸಲಾಗುತ್ತಿದ್ದುದನ್ನು ಉಲ್ಲೇಖಿಸಿದ್ದಾರೆ.