ಬೆಂಗಳೂರು: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುಡ್ಡ, ಘಟ್ಟಪ್ರದೇಶಗಳು ಕುಸಿಯುತ್ತಿದ್ದು, 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಇಡೀ ಕೊಡಗು ಭಾರೀ ಮಳೆಯಿಂದಾಗಿ ತತ್ತರಿಸುತ್ತಿದ್ದು, ಎಲ್ಲೆಡೆ ಜಲ ಪ್ರವಾಹ ಎದುರಾಗಿದೆ. 


COMMERCIAL BREAK
SCROLL TO CONTINUE READING

ಶಿರಾಡಿ ಘಾಟಿಯಲ್ಲಿ ಎರಡು ಮೂರು ಕಡೆ ಭೂ ಕುಸಿತವಾಗಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಅಪಘಾತಗಳೂ ಸಂಭವಿಸಿದ್ದು, ಭೀತಿ ಹೆಚ್ಚಿಸಿದೆ. ಈ ಕಾರಣದಿಂದ ಶಿರಾಡಿಯಲ್ಲಿ 4 ದಿನಗಳ ಕಾಲ ಲಘು ವಾಹನಗಳು ಹಾಗೂ 15 ದಿನಗಳ ಕಾಲ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಒಟ್ಟಾರೆ ಆಗಸ್ಟ್ 25ರವರೆಗೆ ಶಿರಾಡಿ ರಸ್ತೆ ಸಂಚಾರ ನಿಷೇಧಿಸಲಾಗಿದೆ. 


ವರುಣನ ಆರ್ಭಟಕ್ಕೆ ಮನೆಗಳಿಗೆ ನೀರು ನುಗ್ಗಿದ್ದು, ಜನ ನಿರಾಶ್ರಿತರಾಗಿದ್ದಾರೆ. ಎನ್ಡಿಆರ್ ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಂತ್ರಸ್ತರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಕೊಡಗಿನ ಹಟ್ಟಿಹೊಳೆ ಭಾಗದಲ್ಲಿ ರಾತ್ರಿಯಿಡೀ ಮಳೆ ಸುರಿದ ಪರಿಣಾಮ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ರಕ್ಷಣಾ ಕಾರ್ಯಕ್ಕೂ ತೊಂದರೆಯಾಗುತ್ತಿದೆ. ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಜನರಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ರಕ್ಷಣಾ ತಂಡಗಳನ್ನು, ತಮ್ಮ ಬಂಧು ಬಳಗದವರನ್ನು ಸಂಪರ್ಕಿಸಲು ಮೊಬೈಲ್ ಸಂಪರ್ಕವೂ ಕಡಿತಗೊಂಡಿದೆ. 


ಕೇರಳಕ್ಕೆ ಹೋಗುವ ಹೆದ್ದಾರಿ ಕೂಡ ಬಂದ್ ಆಗಿದೆ. ಜಿಲ್ಲೆಯಲ್ಲಿ ಪರಿಹಾರ ಕಾರ್ಯಾಚರಣೆ ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಅಗತ್ಯ ನೆರವುಗಳನ್ನು ಪಡೆಯುವಂತೆ, ಜನರ ರಕ್ಷಣೆಗೆ ಹೆಲಿಕಾಪ್ಟರ್ ಗಳನ್ನು ಬಳಸುವಂತೆ ಕೂಡ ಸೂಚನೆ ನೀಡಿದ್ದಾರೆ.