ಅನಂತದೆಡೆಗೆ ಸಾಗಿದ ನಡೆದಾಡುವ ದೇವರು: ಸಂಜೆ 4:30ರ ಬಳಿಕ ಕ್ರಿಯಾಸಮಾಧಿ
ಹಳೆಯ ಮಠದ ಕ್ರಿಯಾ ಸಮಾಧಿ ಒಳಗೆ ಅಂತಿಮ ವಿಧಿ ವಿಧಾನ.
ತುಮಕೂರು: 'ಕರ್ನಾಟಕ ರತ್ನ' ಪುರಸ್ಕೃತರಾದ ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ(111) ಶತಾಯುಷಿ ಸೋಮವಾರ ಬೆಳಿಗ್ಗೆ 11:44ಕ್ಕೆ ಮಠದಲ್ಲಿ ಶಿವೈಕ್ಯರಾದರು. 'ತ್ರಿವಿಧ ದಾಸೋಹಿ', 'ನಡೆದಾಡುವ ದೇವರು', 'ಕಾಯಕ ಯೋಗಿ' ಎಂದೆಲ್ಲಾ ಕರೆಸಿಕೊಳ್ಳುವ ಶ್ರೀಗಳ ಅಂತಿಮ ದರ್ಶನಕ್ಕಾಗಿ ಸಂಜೆ 3:30ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 4:30ರ ಶ್ರೀಗಳ ಬಳಿಕ ಕ್ರಿಯಾಸಮಾಧಿ ನಡೆಯಲಿದೆ.
ಸಿದ್ದಗಂಗಾ ಶ್ರೀಗಳ ಅಂತಿಮ ಕ್ರಿಯಾಪೂಜೆಗೆ ಸಕಲ ಸಿದ್ದತೆ ನಡೆಯುತ್ತಿದ್ದು, 5 ಮೆಟ್ಟಿಲುಗಳನ್ನೊಳಗೊಂಡ ಸಮಾಧಿ ನಿರ್ಮಾಣ ಮಾಡಲಾಗಿದೆ. ಓ ನಮಃ ಶಿವಾಯ ಪರಿಕಲ್ಪನೆಯಲ್ಲಿ ಶ್ರೀಗಳ ಸಮಾಧಿ ನಿರ್ಮಾಣ ಮಾಡಲಾಗಿದೆ. ಸಮಾಧಿ ಕೆಳಗೆ ವಿಶೇಷ ಪೀಠ ಹಾಗೂ ಗುಹೆ ನಿರ್ಮಾಣ ಮಾಡಲಾಗಿದ್ದು, ಸಂಜೆ 4.30ರ ಬಳಿಕ ಪೀಠದ ಮೇಲೆ ಶ್ರೀಗಳನ್ನ ಕೂರಿಸಿ ಕೊನೆಯ ಪೂಜೆ ನೆರವೇರಿಸಲಾಗುವುದು.
ಶ್ರೀಗಳೇ ಗುರುತಿಸಿದ್ದ ಸ್ಥಳದಲ್ಲೇ ಅಂತಿಮ ವಿಧಿ ವಿಧಾನ:
ಸಿದ್ಧಗಂಗಾ ಶ್ರೀಗಳು ಇಚ್ಛಿಸಿದಂತೆ, 40 ವರ್ಷಗಳ ಹಿಂದೆ ಅವರೇ ಗುರುತಿಸಿದ್ದ ಸ್ಥಳದಲ್ಲಿ ಅವರ ಅಂತಿಮ ಕಾರ್ಯ ವಿಧಿಗಳು ಇಂದು 4.30ರ ಬಳಿಕ ಜರುಗಲಿವೆ. ಮಂಗಳವಾರ ಸಂಜೆ 4.30ಕ್ಕೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಕಿರಿಯ ಶ್ರೀಗಳಾದ ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ.
ಇಂದು ರಾಜ್ಯಾದ್ಯಂತ ಸರ್ಕಾರಿ ರಜೆ, ಮೂರು ದಿನ ಶೋಕಾಚರಣೆ:
ಶ್ರೀ ಸಿದ್ಧಗಂಗಾ ಮಠದ ಶತಾಯುಷಿ ಶ್ರೀ ಶಿವಕುಮಾರ ಸ್ವಾಮಿಜಿ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಾದ್ಯಂತ ಶಾಲಾ -ಕಾಲೇಜುಗಳಿಗೆ, ಕಚೇರಿಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಿದ್ದಗಂಗಾಶ್ರೀ ಲಿಂಗಕೈರಾದ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದ್ದು, ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ದಿ.ಕುಮಾರಸ್ವಾಮಿ ಹೇಳಿದ್ದಾರೆ.
ಪರೀಕ್ಷೆ ಮುಂದೂಡಿಕೆ:
ಸಿದ್ಧಗಂಗಾ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.