ತುಮಕೂರು: ಶಿವೈಕ್ಯರಾಗಿರುವ ಸಿದ್ಧಲಿಂಗಾ ಶ್ರೀಗಳ ಕ್ರಿಯಾಸಮಾಧಿ ಇಂದು ಸಂಜೆ 5 ಗಂಟೆ ಬಳಿಕ ನಡೆಯಲಿದೆ. ಗದ್ದುಗೆಯಲ್ಲಿ ಈಗಾಗಲೇ ಕ್ರಿಯಾಸಮಾಧಿಯ ವಿಧಿ-ವಿಧಾನ ಪ್ರಾರಂಭವಾಗಿದೆ. ಹಳೆ ಮಠದಲ್ಲಿ ಉದ್ದಾನ ಶಿವಯೋಗಿಗಳ ಗದ್ದುಗೆ ಪಕ್ಕದಲ್ಲೇ ಶ್ರೀಗಳ ಕ್ರಿಯಾ ಸಮಾಧಿಗೆ ಸುಮಾರು 20ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ವಿಧಿವಿಧಾನ ಆರಂಭಗೊಂಡಿದೆ.


COMMERCIAL BREAK
SCROLL TO CONTINUE READING

ಲಿಂಗಧಾರಣೆ ಮಾಡಿ, ಇಷ್ಟ ಲಿಂಗ ಪೂಜೆ ಮಾಡುವ ಆಧ್ಯಾತ್ಮ ಸಾಧಕರಿಗೆ ಲಿಂಗಾಯತ ಪರಂಪರೆಯಲ್ಲಿ ಮಾಡುವ ಅಂತಿಮ ವಿಧಿಯೇ ಕ್ರಿಯಾಸಮಾಧಿ. ಶವವನ್ನು ಶಿವವಾಗಿಸುವ ಕ್ರಿಯೆಯನ್ನೇ ಕ್ರಿಯಾಸಮಾಧಿ ಎಂದು ಕರೆಯುವುದೂ ಉಂಟು. 


ಶ್ರೀಗಳ ಇಚ್ಚೆಯಂತೆ ಕ್ರಿಯಾಸಮಾಧಿ:
ಸಿದ್ಧಗಂಗಾ ಶ್ರೀಗಳು ಇಚ್ಛಿಸಿದಂತೆ, 37 ವರ್ಷಗಳ ಹಿಂದೆ ಅವರೇ ಗುರುತಿಸಿದ್ದ ಸ್ಥಳದಲ್ಲಿ ಅವರ ಅಂತಿಮ ಕಾರ್ಯ ವಿಧಿಗಳು ಜರುಗಲಿವೆ.  ಶ್ರೀಗಳ ಪಾರ್ಥಿವ ಶರೀರಕ್ಕೆ ನಾಡಿನ ಪುಣ್ಯ ನದಿಗಳಿಂದ ತರಿಸಲಾದ ಜಲದಿಂದ ಅಭಿಷೇಕ ನೆರವೇರಿಸಿ ಪುಣ್ಯ ಸ್ನಾನ ಮಾಡಿಸಲಾಗುತ್ತದೆ. ಹೊಸ ವಸ್ತ್ರಗಳನ್ನು ತೊಡಿಸಲಾಗುತ್ತದೆ. ಆನಂತರ ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ. ಎರಡು ಕೈಗಳನ್ನು ಎದೆಯ ಸ್ವಲ್ಪ ಕೆಳ ಭಾಗದಲ್ಲಿ ಜೋಡಿಸಿ ಅಲ್ಲಿ ಅವರ ಇಷ್ಟ ಶಿವಲಿಂಗವನ್ನು ಇಟ್ಟು ಅದಕ್ಕೆ ಪಂಚಾಭಿಷೇಕ ಮಾಡಲಾಗುತ್ತದೆ. ಮತ್ತೆ ಪೂಜೆ ಮಾಡಿ ನಂತರ ದರ್ಶನ ಮಾಡಿಸಲಾಗುತ್ತದೆ. 


ಗುಂಡಿಯ ಒಳ ಭಾಗದಲ್ಲಿ ಪೂಜೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಇಡಲಾಗುತ್ತದೆ. ಬಿಲ್ವ ಪತ್ರೆ ಹಾಗೂ ಓಂಕಾರ ತಿದ್ದಿರುವ ವಿಭೂತಿಗಳ ಮೂಲಕ ಸಂಪೂರ್ಣ ಮುಚ್ಚಲಾಗುತ್ತದೆ.  ಕೊನೆಯಲ್ಲಿ ಮರಳಿನಿಂದ ಮುಚ್ಚಲಾಗುತ್ತದೆ. ಸಾಂಪ್ರದಾಯಿಕವಾಗಿ ಬಿಲ್ವ ಪತ್ರೆ ಹಾಗೂ ವಿಭೂತಿಯಿಂದಲೇ ಮುಚ್ಚಲಾಗುತ್ತದೆ. ಬಳಿಕ ಅದರ ಮೇಲೆ ಲಿಂಗವಿಡುತ್ತಾರೆ ಅದನ್ನು ಸಿದ್ದೇಶ್ವರ ಲಿಂಗ ಎನ್ನುವರು.