ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ ಅವರಿಗೆ ಸ್ವಾಭಿಮಾನವಿದ್ದರೆ ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿ 18 ಜನ ಸಂಸದರ ಜೊತೆ ರಾಜೀನಾಮೆ ನೀಡಲಿ ಎಂದು ಆಹಾರ ಮತ್ತು ನಾಗರಿಕ ಖಾತೆ ಸಚಿವ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಪ್ರಧಾನಮಂತ್ರಿ ಅವರ ಮುಂದೆ ಮಾತನಾಡುವ ಧೈರ್ಯ ಇವರಲ್ಲಿ ಯಾರಿಗೂ ಇಲ್ಲ. ಆದರೆ ಇವರು ಇಲ್ಲಸಲ್ಲದ ರಾಜಕೀಯ ಮಾತ್ರ ಮಾಡುತ್ತಾರೆ . ಶೋಭಾ ಕರಂದ್ಲಾಜೆ ಅವರು ಇಲ್ಲಿ ಮಾತನಾಡಿದಷ್ಟು ಸಂಸತ್‌ನಲ್ಲಿ ಮಾತನಾಡಿದರೆ ಈ ಸಮಸ್ಯೆ ಇಷ್ಟೊತ್ತಿಗೆ ಬಗೆಹರಿಯುತ್ತಿತ್ತು ಎಂದು ಕಿಡಿಕಾರಿದರು.


ಮಹದಾಯಿ ಸಮಸ್ಯೆ ಎರಡು ರಾಜ್ಯಗಳ ನಡುವಿನ ಸಮಸ್ಯೆಯಾಗಿದ್ದು, ಎರಡೂ ರಾಜ್ಯಗಳು ಪರಸ್ಪರ ಬಗೆಹರಿಸಿಕೊಳ್ಳದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಬಗೆಹರಿಯದ ದೇಶದ ಪ್ರಧಾನಿ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಆದರೆ ಅವರು ಆ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಖಾದರ್ ಆರೋಪಿಸಿದರು. 


ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸ್ಥಾನದಲ್ಲಿ ಒಂದು ಸಮಿತಿ ರಚಿಸಿ ಸಭೆ ನಡೆಸಬೇಕು. ಆದರೆ ಪ್ರಧಾನಿಯವರು ಈ ಸಂಬಂಧ ನಮ್ಮ ಮುಖ್ಯಮಂತ್ರಿಯನ್ನು ಸಭೆಗೆ ಕರೆಯುವುದೂ ಇಲ್ಲ, ಟ್ರಿಬ್ಯೂನಲ್‌ಗೆ ಪತ್ರವನ್ನು ಕೂಡ ಬರೆಯುವುದು ಇಲ್ಲ. ಹೀಗಿದ್ದಾಗ ಸಮಸ್ಯೆ ಎಲ್ಲಿದ ಬಗೆಹರಿಯಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.