ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಬಿಜೆಪಿ ಪತ್ರ
ನಮ್ಮ ಪೋನ್`ಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಸಂಸದರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಸಾಕಷ್ಟು ರಾಜಕೀಯ ಬೆಳವಣಿಗೆಗಳ ಬೆನ್ನಲೇ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋನ್ ಕದ್ದಾಲಿಕೆ ಆರೋಪ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಸಂಸದೆ ಶೋಭಾ ಕರಂದ್ಲಾಜೆ, ಜಿ.ಎಂ.ಸಿದ್ದೇಶ್ವರ್ ಮತ್ತು ಪಿ.ಸಿ.ಮೋಹನ್ ಅವರು, ನಮ್ಮ ಪೋನ್'ಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡಿದೆ. ನಮ್ಮ ಪ್ರತಿಯೊಂದು ನಡೆಯನ್ನೂ ಕುತಂತ್ರದಿಂದ ತಿಳಿದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ಮೂಲಕ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ. ಇದರಿಂದ ನಮ್ಮ ಖಾಸಗಿತನದ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಆರೋಪಿಸಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.