ಬೆಂಗಳೂರು: ತಮ್ಮ ಹುಟ್ಟೂರು ಬೂಕನಕೆರೆ ಇರುವ ಕೆ.ಆರ್. ಪೇಟೆ ವಿಧಾನಸಭೆ ಕ್ಷೇತ್ರ(KR Pet Assembly constituency)ಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಬೇಕೆಂದು ಪಣ ತೊಟ್ಟಿರುವ ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ(BS Yediyurappa) ಅವರಿಗೆ ಕಡೆ ಕ್ಷಣದಲ್ಲಿ ಭಾರೀ ಹಿನ್ನಡೆಯಾಗಿದೆ.


COMMERCIAL BREAK
SCROLL TO CONTINUE READING

ಕೆ.ಆರ್. ಪೇಟೆ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಪಾಳೇಪಟ್ಟು. ಇಲ್ಲಿ ತಾವು ಮುಖ್ಯಮಂತ್ರಿ ಆಗಿರುವ ಸಂದರ್ಭದಲ್ಲಾದರೂ ಕಮಲ ಅರಳುವಂತೆ ಮಾಡಬೇಕೆನ್ನುವುದು ಯಡಿಯೂರಪ್ಪ ಅವರ ದೂರದ ಆಸೆ. ಜೊತೆಗೀಗ ತಾವು ಮುಖ್ಯಮಂತ್ರಿ ಆಗಲೆಂದೇ ನಾರಾಯಣಗೌಡ(Narayangowda) ರಾಜೀನಾಮೆ ಕೊಟ್ಟಿದ್ದರಿಂದ ಅವರನ್ನು ಗೆಲ್ಲಿಸಿಕೊಳ್ಳುವ ಗುರುತರ ಜಾವಾಬ್ದಾರಿ ಕೂಡ ಇದೆ. ಅದೇ ಕಾರಣಕ್ಕೆ ಮಗ ವಿಜಯೇಂದ್ರನಿಗೆ ಉಸಾಬರಿ ಕೊಟ್ಟಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಅವರನ್ನು ನಿಯೋಜಿಸಿದ್ದಾರೆ. ಬೇರೆ ಬೇರೆ ನಾಯಕರನ್ನೂ ಕಳಿಸಿ ಪ್ರಚಾರ ಮಾಡಿಸುತ್ತಿದ್ದಾರೆ.


ಇಷ್ಟೆಲ್ಲಾ ಆದರೂ ಸಂಸದೆ ಸುಮಲತಾ ಅಂಬರೀಶ್ ಮನವೊಲಿಸುವಲ್ಲಿ ಅಥವಾ ಯಶಸ್ವಿಯಾಗುವಲ್ಲಿ ಯಡಿಯೂರಪ್ಪ ಆಗಲೀ ಅಥವಾ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ನಾರಾಯಣಗೌಡ ಆಗಲಿ ವಿಫಲರಾಗಿದ್ದಾರೆ‌. ತಮ್ಮ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಕೂಡ ತಮ್ಮ ಪರ ಕೆಲಸ ಮಾಡಿದ್ದ ಕಾರಣಕ್ಕೆ ಸುಮಲತಾ ತಟಸ್ಥ ನಿಲುವು ತೆಳೆದಿದ್ದಾರೆ.


ಸುಮಲತಾ ತಟಸ್ಥ ನಿಲುವು ತೆಳೆದ ಬಳಿಕ ಕಮಲ‌ ಕಲಿಗಳು ಪರೋಕ್ಷವಾಗಿ ಸುಮಲತಾ ಬೆಂಬಲ ತಮಗಿದೆ ಎಂದು ಡಂಗೂರ ಹಾಕಲು ಮಾಡಲು ಮುಂದಾದರು. ಅದರಿಂದ ಪ್ರಯೋಜನ ಆಗುವುದಿಲ್ಲ ಎಂದು ಅರಿವಾಗತೊಡಗಿದಾಗ ಮಂಡ್ಯ ಸಂಸತ್ ಚುನಾವಣೆಯಲ್ಲಿ 'ಸ್ವಾಭಿಮಾನದ  ಕಹಳೆ ಊದಿದ್ದ' ಜೋಡೆತ್ತುಗಳನ್ನು ಕರೆತಂದು ಅವರಿಂದ ಪ್ರಚಾರ ಮಾಡಿಸಲು ಮುಂದಾದರು. ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿದರೆ ಸುಮಲತಾ ಬೆಂಬಲ ಬಿಜೆಪಿಗಿದೆ ಎಂಬ ಸಂದೇಶ ತಾನೇತಾನಾಗಿ ಹೋಗಿಬಿಡುತ್ತದೆ ಎಂದು ಲೆಕ್ಕಚಾರ ಹಾಕಿದರು‌.


ಬಹಿರಂಗ ಪ್ರಚಾರ ಕೊನೆಗೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ. ಆದರೆ ಜೋಡೆತ್ತುಗಳ ಸುಳಿವಿಲ್ಲ. 'ಜೋಡೆತ್ತುಗಳಿಗೆ ಯಾವ ಟಗರಿನ ಭಯವಿದೆಯೋ', ದರ್ಶನ್ ಮತ್ತು ಯಶ್ ಕೆ.ಆರ್. ಪೇಟೆಯಲ್ಲಿ ಪ್ರಚಾರ ಮಾಡುತ್ತಿಲ್ಲ. ಇಷ್ಟು ದಿನ ಬಿಜೆಪಿ ಪ್ರಚಾರದಲ್ಲಿ ಮುಂದಿತ್ತು. ಯುವಕರಿದ್ದರು. ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬಂದಿದ್ದರೆ ಅವು ಮತಗಳಾಗಿ ಪರಿವರ್ತನೆ ಆಗಲು ಸಹಕಾರಿ ಆಗುತ್ತಿತ್ತು. ಯಶ್ ಬರದಿದ್ದರೂ ದರ್ಶನ್ ಬಂದೇ ಬರುತ್ತಾರೆ ಎಂಬ ಸುದ್ದಿ ಸರಿದಾಡುತ್ತಿತ್ತು‌. ಆದರೀಗ ದರ್ಶನ್ ಮತ್ತು ಯಶ್ ಕೈಕೊಟ್ಟಿರುವುದರಿಂದ ಕೆ.ಆರ್. ಪೇಟೆಯ ಕಮಲ ಕಲಿ ನಾರಾಯಣಗೌಡ ಕನಲಿಹೋಗಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಉತ್ಸಾಯ ದಿಢೀರಂತೆ ಕುಸಿದುಹೋದಂತೆ ಭಾಸವಾಗಿದೆ.