ತುಮಕೂರು: ನಿನ್ನೆ ಲಿಂಗೈಕ್ಯರಾದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ನಡೆದಾಡುವ ದೇವರು ಎಂದೇ ಹೆಸರಾದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ವಿಧಿ-ವಿಧಾನ ಸಿದ್ಧಗಂಗಾ ಮಠದ ಆವರಣದಲ್ಲಿ ಮಂಗಳವಾರ ನೆರವೇರಿತು. 


COMMERCIAL BREAK
SCROLL TO CONTINUE READING

ಈ ಹಿಂದೆಯೇ ಶಿವಕುಮಾರ ಸ್ವಾಮೀಜಿಗಳು ತಮ್ಮ ಕ್ರಿಯಾ ಸಮಾಧಿ ಹೇಗೆ ನೆರವೇರಬೇಕು ಎಂದು ಬರೆದಿಟ್ಟಿದ್ದರಂತೆ. ಅದರಂತೆಯೇ ಅಂತಿಮ ವಿಧಿ-ವಿಧಾನಗಳನ್ನು ಇಂದು ನೆರವೇರಿಸಲಾಯಿತು. ವೀರಶೈವ ಲಿಂಗಾಯಿತ ಆಗಮೋಕ್ತ ರೀತಿಯಲ್ಲಿ ನಡೆದ ವಿಧಿ-ವಿಧಾನದಲ್ಲಿ ಪ್ರಥಮವಾಗಿ ಶ್ರೀಗಳ ಪಾರ್ಥಿವ ಶರೀರಕ್ಕೆ ಅಂತಿಮ ಪುಣ್ಯ ಸ್ನಾನ ಮಾಡಿಸಿ, ಪುಣ್ಯ ನದಿಗಳಿಂದ ತರಿಸಿದ್ದ ಪವಿತ್ರ ತೀರ್ಥಗಳಿಂದ ಅಭಿಷೇಕ ಮಾಡಿ, ಹೊಸ ಕಾಷಾಯ ವಸ್ತ್ರಗಳನ್ನು ಧರಿಸಿ, ಬಳಿಕ ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಲಾಯಿತು. 


ಬಳಿಕ ಶ್ರೀ ಪಾರ್ಥಿವ ಶರೀರವನ್ನ ಗದ್ದುಗೆಯಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಿ, ಈ ಸಮಯದಲ್ಲಿ ಶ್ರೀಗಳ ಕೈಯಲ್ಲಿ ಇಷ್ಟ ಲಿಂಗವನ್ನು ಇರಿಸಿ, ರುದ್ರಾಕ್ಷ ಮಂತ್ರ ಪಠಣ ಮಾಡುತ್ತಾ ಶ್ರೀಗಳ ಪಾರ್ಥಿವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ನಂತರ ಮಹಾ ಮಂಗಳಾರತಿ ಮಾಡಲಾಯಿತು. ಬಳಿಕ ಶ್ರೀಗಳ ಲಿಂಗ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಕೂರಿಸಿ, ಗೋವಿನ ಸಗಣಿಯಿಂದ ತಯಾರಿಸಲಾದ 10 ಸಾವಿರ ಗಟ್ಟಿ ವಿಭೂತಿಯಿಂದ ಸಮಾಧಿ ಕ್ರಿಯೆ ಮಾಡಲಾಯಿತು.


ಸುಮಾರು ಎರಡು ಗಂಟೆಗಳ ಕಾಲ ನಡೆದ ಶ್ರೀಗಳ ಕ್ರಿಯಾಭೀಷೇಕ ಮತ್ತು ಇತರ ಕಾರ್ಯಗಳನ್ನು 20ಕ್ಕೂ ಹೆಚ್ಚು ಪುರೋಹಿತರು ನೆರವೇರಿಸಿದರು. ಶ್ರೀಗಳ ಕ್ರಿಯಾವಿಧಿಯನ್ನು ಮಠದ ಆವರಣದಲ್ಲಿ ಕುಳಿತು ಮಕ್ಕಳು ಹಾಗೂ ವೀಕ್ಷಕರು ಮಕ್ಕಳು ಹಾಗೂ ಭಕ್ತರು ವೀಕ್ಷಿಸಿದರು. 


ಇದಕ್ಕೂ ಮುನ್ನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ಗೋಸಲ ಸಿದ್ಧೇಶ್ವರ ವೇದಿಕೆಯಿಂದ ಕ್ರಿಯಾ ಸಮಾಧಿ ಕಟ್ಟಡದ ವರೆಗೆ ಶ್ರೀಗಳ ಅಂತಿಮ ಯಾತ್ರೆ ನಡೆಸಲಾಯಿತು. 400ಕ್ಕೂ ಹೆಚ್ಚು ಸ್ವಾಮೀಜಿಗಳು ಹಾಗೂ ಸಾವಿರಕ್ಕೂ ಅಧಿಕ ಗಣ್ಯರು ಮೆರವಣಿಗೆಯಲ್ಲಿ ಸಾಗಿದರು. ಕ್ರಿಯಾ ಸಮಾಧಿ ಸ್ಥಳ ತಲುಪಿದ ಬಳಿಕ ಶ್ರೀಗಳ ಲಿಂಗ ಶರೀರವನ್ನು ರುದ್ರಾಕ್ಷಿ ರಥದಲ್ಲಿ ಕ್ರಿಯಾ ಸಮಾಧಿ ಸ್ಥಳಕ್ಕೆ ಹೊತ್ತೊಯ್ಯಲಾಯಿತು. 


ಅಂತಿಮ ಕ್ರಿಯಾ ವಿಧಿಗೆ ಮುನ್ನ ಶ್ರೀಗಳಿಗೆ ಸಕಲ ಸರ್ಕಾರಿ ಗೌರವಗಳನ್ನು ಸಮರ್ಪಿಸಲಾಯಿತು. ರಾಷ್ಟ್ರಧ್ವಜ ಹೊದಿಸಿ, ಪೊಲೀಸ್ ಬ್ಯಾಂಡ್ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.  ಪೊಲೀಸರು ಮೂರು ಸುತ್ತು ಕುಶಾಲತೋಪುಗಳನ್ನು ಹಾರಿಸಿ ಗೌರವ ಸಲ್ಲಿಸಿದರು. ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಶ್ರೀಗಳ ಭೌತಿಕ ಶರೀರಕ್ಕೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. ಬಳಿಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ನಮನ ಸಲ್ಲಿಸಿದರು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಷ್ಪನಮನ ಸಲ್ಲಿಸಿದರು. 


ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಸ್ವಾಮೀಜಿಯ ಅಂತಿಮ ದರ್ಶನ ಪಡೆದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಬಾಬಾ ರಾಮದೇವ್, ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಅಂತಿಮ ಕಾರ್ಯದಲ್ಲಿ ಪಾಲ್ಗೊಂಡಿದ್ದರು.