ಚೆನ್ನೈ: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಪಿತ್ತನಾಳದಲ್ಲಿ ಉಂಟಾಗುತ್ತಿದ್ದ ಸೋಂಕಿನ ಶಸ್ತ್ರಚಿಕಿತ್ಸೆಗಾಗಿ ಡಿ.7 ರಂದು ಶ್ರೀಗಳನ್ನು ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಡಿ.8ರಂದು ಪಿತ್ತನಾಳ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶ್ರೀಗಳನ್ನು ಐಸಿಯುನಿಂದ ಡಿ.13ರಂದು ವಿಶೇಷ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದ್ದರಿಂದ ಮರುದಿನ ಮತ್ತೆ ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದವರೆಸಲಾಗಿತ್ತು. ಇದೀಗ ಶ್ರೀಗಳ ಆರೋಗ್ಯ ಸುಧಾರಿಸಿದ್ದು ಇಂದು ಮಠಕ್ಕೆ ಮರಳಲಿದ್ದಾರೆ.


ಚೆನ್ನೈನಿಂದ ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಏರ್ ಆ್ಯಂಬುಲೆನ್ಸ್ ನಲ್ಲಿ ಬರಲಿರುವ ಶ್ರೀಗಳು, ಅಲ್ಲಿಂದ ಕಾರಿನಲ್ಲಿ ಮಠಕ್ಕೆ ತೆರಳಲಿದ್ದಾರೆ.


ಶ್ರೀಗಳು ಮರಳಿ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಮಠದಲ್ಲಿ ಸಂಭ್ರಮ ಸಡಗರದ ವಾತಾವರಣ ನಿರ್ಮಾಣಗೊಂಡಿದೆ. ಭಕ್ತರು ತಂಡೋಪತಂಡವಾಗಿ ಮಠಕ್ಕೆ ಆಗಮಿಸುತ್ತಿದ್ದು ಶ್ರೀಗಳನ್ನು ಕಾಣಲು ಕಾತುರರಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್' ಆಯೋಜಿಸಲಾಗಿದೆ.