ಸಿದ್ದರಾಮಯ್ಯ ರಾಜೀನಾಮೆ
ರಾಜ್ಯ ಉಪಚುನಾವಣೆಯ ಸೋಲಿಗೆ ನೈತಿಕ ಹೊಣೆಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ.
ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿದ್ದು, ಉಳಿದ 12 ಕ್ಷೇತ್ರಗಳಲ್ಲಿ ಸೋಲುಂಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಉಪಚುನಾವಣಾ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದರು. ಈ ವೇಳೆ ಮಾತನಾಡಿದ ಅವರು ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವನು. ಈ 15 ಉಪಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ನಾನು ಗೌರವಿಸುತ್ತೇನೆ. ನಮ್ಮ ಮತದಾರರು ಪ್ರಜಾಪ್ರಭುತ್ವದ ಉಳಿವಿನ ದೃಷ್ಟಿಯಿಂದ ಪಕ್ಷಾಂತರಿಗಳಿಗೆ, ಕುದುರೆ ವ್ಯಾಪಾರಕ್ಕೆ ಒಳಗಾಗಿದ್ದವರಿಗೆ ಶಿಕ್ಷೆ ಕೊಡುತ್ತಾರೆ. ಅವರಿಗೆ ಪಾಠ ಕಲಿಸುತ್ತಾರೆ ಎಂಬ ನಿರೀಕ್ಷೆಯಿತ್ತು, ಆ ನಿರೀಕ್ಷೆ ಹುಸಿಯಾಗಿದೆ. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇನೆ. ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿಹಿಡಿಯುವ ಅಗತ್ಯವಿದೆ. ಪಕ್ಷದ ಹಿತದೃಷ್ಟಿಯಿಂದ ಶಾಸಕಾಂಗ ಪಕ್ಷದ ನಾಯಕತ್ವದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದವರು ತಿಳಿಸಿದರು.
ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಲ್ಲಿಸಿರುವುದಾಗಿ ತಿಳಿಸಿದ ಸಿದ್ದರಾಮಯ್ಯ, ಅದರ ಒಂದು ಪ್ರತಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್(KC Venugopal) ಅವರಿಗೂ, ಇನ್ನೊಂದು ಪ್ರತಿಯನ್ನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್(Dinesh Gundurao) ಅವರಿಗೂ ಕಳುಹಿಸಿಕೊಡುವುದಾಗಿ ತಿಳಿಸಿದರು.