ಬಹಿರಂಗ ಚರ್ಚೆಗೆ ಸಿದ್ಧ; ಸ್ಥಳ, ದಿನಾಂಕ ತಿಳಿಸಲಿ: ರೆಡ್ಡಿ ಸವಾಲಿಗೆ ಸಿದ್ದರಾಮಯ್ಯ ತಿರುಗೇಟು
ಜನಾರ್ಧನ ರೆಡ್ಡಿಯವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ, ಅವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಬಳ್ಳಾರಿಯಿಂದ ಗಡಿಪಾರಾಗಿರುವ ರೆಡ್ಡಿಯವರೇ ಚರ್ಚೆಯ ಸ್ಥಳ ಮತ್ತು ಸಮಯ ನಿಗದಿಪಡಿಸಲಿ ಎಂದಿದ್ದಾರೆ.
ಬೆಂಗಳೂರು: ತಮ್ಮ ಮೇಲಿನ ಅಕ್ರಮ ಗಣಿಗಾರಿಕೆ ಆರೋಪದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಮಾಜಿ ಸಚಿವ ಜನಾರ್ಧನರೆಡ್ಡಿ ಸವಾಲನ್ನು ಸ್ವೀಕರಿಸಿರುವ ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಅವರು ಚರ್ಚೆಗೆ ಸ್ಥಳ ಮತ್ತು ದಿನಾಂಕ ತಿಳಿಸುವಂತೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಜನಾರ್ಧನ ರೆಡ್ಡಿಯವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ, ಅವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಬಳ್ಳಾರಿಯಿಂದ ಗಡಿಪಾರಾಗಿರುವ ರೆಡ್ಡಿಯವರೇ ಚರ್ಚೆಯ ಸ್ಥಳ ಮತ್ತು ಸಮಯ ನಿಗದಿಪಡಿಸಲಿ ಎಂದಿದ್ದಾರೆ.
ಜನಾರ್ಧನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಚಿನ್ನದ ಕಮೋಡ್, ಚಿನ್ನದ ಕುರ್ಚಿ ಇವೆಲ್ಲ ಜನಾರ್ಧನ ರೆಡ್ಡಿಯವರ ವೈಭವದ ಜೀವನಕ್ಕೆ ಸಾಕ್ಷಿಗಳು. ಇಷ್ಟೆಲ್ಲ ಎಲ್ಲಿಂದ ಬಂತು? ಇವರೇನು ಸಾಮ್ರಾಟ ವಂಶಸ್ಥರೇ? ಈ ಸಂಪತ್ತು ಗಣಿಲೂಟಿಯ ಸಂಪಾದನೆ ಎನ್ನುವುದು ಬಳ್ಳಾರಿ ಮಾತ್ರವಲ್ಲ ಇಡೀ ದೇಶಕ್ಕೆ ಗೊತ್ತು. ಇಷ್ಟಾದ ಮೇಲೆಯೂ ತಮ್ಮನ್ನು ಪ್ರಾಮಾಣಿಕರೆಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ವೇ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಬಳ್ಳಾರಿಯನ್ನು ಸರ್ವನಾಶ ಮಾಡಿದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಚಳ್ಳಕೆರೆ, ಪಾವಗಡ, ಮೊಳಕಾಲ್ಮೂರುಗಳಿಗೆ ಕುಡಿಯುವ ನೀರಿನ ಪೂರೈಕೆಗೆ ತುಂಗಭದ್ರಾ ಹಿನ್ನೀರನ್ನು ಪೂರೈಸುವ ಶಾಶ್ವತ ಯೋಜನೆಯನ್ನು ರೂಪಿಸಿ, ಟೆಂಡರ್ ಕರೆದು, ಟೆಂಡರ್ ಎಜೆನ್ಸಿಯನ್ನು ಕೂಡ ನಿಗದಿಪಡಿಸಿರುವುದು ನಮ್ಮ ಸರ್ಕಾರ. ಜನಾರ್ಧನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಮಂತ್ರಿಯಾಗಿದ್ದಾಗ ಜಿಲ್ಲೆಗೆ ಏನು ಮಾಡಿದ್ದಾರೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
1991ರಲ್ಲಿ ದೇವೇಗೌಡರು ಲೋಕಸಭಾ ಸದಸ್ಯರಾಗಿದ್ದಾಗ ಉಗ್ರಪ್ಪನವರು ನಾಯಕ, ವಾಲ್ಮೀಕಿ ಮುಂತಾದ ಜಾತಿಗಳಿಗೆ ಎಸ್.ಟಿ ಮೀಸಲಾತಿ ದೊರೆಯುವಂತೆ ಮಾಡಿದ್ದರು. ಇಂದು ಎಸ್.ಟಿ ಮೀಸಲು ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸಿ ಲೋಕಸಭೆಗೆ ಹೋಗಿದ್ದರೆ ಅದು ದೇವೇಗೌಡರು ಮತ್ತು ಉಗ್ರಪ್ಪನವರ ಕೊಡುಗೆ ಎಂಬುದನ್ನು ಅವರು ಮರೆಯಬಾರದು ಎಂದಿದ್ದಾರೆ.