ಬೆಂಗಳೂರು: ದೇಶದ ದಕ್ಷಿಣ ರಾಜ್ಯಗಳ ರಾಜಕಾರಣಿಗಳು ಒಮ್ಮತದ ಅಭಿಪ್ರಾಯ ಹೊಂದುವ ಅಗತ್ಯವಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಪುದುಚೇರಿ ಮುಖ್ಯಮಂತ್ರಿಗಳೆಲ್ಲರೂ ಒಗ್ಗೂಡಿ ಪ್ರತಿಭಟಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಟ್ವೀಟ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಎಷ್ಟು ಹಣವನ್ನು ವಿನಿಯೋಗಿಸಬೇಕು ಎಂಬುದನ್ನು ನಿರ್ಧರಿಸಲು 15ನೇ ಹಣಕಾಸು ಆಯೋಗಕ್ಕೆ 2011 ಜನಗಣತಿಯನ್ನು ನರೇಂದ್ರ ಮೋದಿ ಸರ್ಕಾರ ಶಿಫಾರಸು ಮಾಡಿದೆ. ಆದರೆ ಇಲ್ಲಿಯವರೆಗೆ, ಇದನ್ನು 1971 ರ ಜನಗಣತಿಯ ಆಧಾರದ ಮೇಲೆ ಮಾಡಲಾಗುತ್ತಿತ್ತು. 


"ತೆರಿಗೆಗಳ ವಿತರಣೆಯನ್ನು ನಿರ್ಧರಿಸಲು 1971 ರ ಜನಗಣತಿಗೆ ಬದಲಾಗಿ 2011 ಜನಗಣತಿಯ ದತ್ತಾಂಶವನ್ನು ಬಳಸಲು ಕೇಂದ್ರ ಸರ್ಕಾರ 15ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಿದೆ. ಇದು ದಕ್ಷಿಣ ರಾಜ್ಯಗಳ ಹಿತಾಸಕ್ತಿಗಳ ಮೇಲೆ ಮತ್ತಷ್ಟು ಪರಿಣಾಮ ಬೀರಲಿದ್ದು, ಇದನ್ನು ನಾವು ವಿರೋಧಿಸುವ ಅಗತ್ಯವಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಇದಕ್ಕೆ ದಕ್ಷಿಣ ಭಾರತದ ಆರು ಮುಖ್ಯಮಂತ್ರಿಗಳ ಹೆಸರನ್ನು ಟ್ಯಾಗ್ ಮಾಡಿದ್ದಾರೆ. ಇವರೊಂದಿಗೆ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನೂ ಕೂಡ ಟ್ಯಾಗ್ ಮಾಡಿದ್ದಾರೆ.



ಅಧಿಕಾರದಲ್ಲಿರುವ ಮತ್ತು ಇಲ್ಲದಿರುವ ದೇಶದ ದಕ್ಷಿಣ ರಾಜ್ಯಗಳ ರಾಜಕಾರಣಿಗಳು ಕೇಂದ್ರ ಸರ್ಕಾರ ಹಣಕಾಸು ಆಯೋಗಕ್ಕೆ ಮಾಡಿರುವ ಶಿಫಾರಸ್ಸಿನ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ದಕ್ಷಿಣದ ರಾಜ್ಯಗಳು ತಮ್ಮ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ, ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಈ ಕಾರ್ಯವಾಗಿಲ್ಲ. ಇದರರ್ಥ ಉತ್ತರ ರಾಜ್ಯಗಳ ಜನಸಂಖ್ಯೆಯು ದಕ್ಷಿಣದ ರಾಜ್ಯಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. 2011ರ ಜನಸಂಖ್ಯೆಯ ಸಂಖ್ಯೆಯನ್ನು ಆಧರಿಸಿ ಕೇಂದ್ರವು ಹಣವನ್ನು ವಿನಿಯೋಗಿಸಿದರೆ, ದಕ್ಷಿಣದ ರಾಜ್ಯಗಳು ಪಡೆಯುವ ಶೇಕಡಾವಾರು ಅನುದಾನವು ಆ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಮಾಡಿದ ಪ್ರಯತ್ನಗಳಿಗೆ ತದ್ವಿರುದ್ಧವಾಗಲಿದೆ.


ಈಗಾಗಲೇ ಅಸ್ತಿತ್ವದಲ್ಲಿರುವ ಕೇಂದ್ರದ ಅನುದಾನ ವಿತರಣೆಯ ಅಸಂಬದ್ಧತೆ ಬಗ್ಗೆ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ದೂರು ನೀಡಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಬ್ಬರೂ ಕೇಂದ್ರದ ಈ ನಡೆಯನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. 
 
1971ರ ಜನಗಣತಿಯನ್ನು ಆಧರಿಸಿ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಣವನ್ನು ವಿತರಿಸಬೇಕು ಎಂದು 1976ರಲ್ಲಿ ಸಂವಿಧಾನಾತ್ಮಕ ತಿದ್ದುಪಡಿ ತರಲಾಯಿತು. 2011ರಲ್ಲಿ ಆ ಅವಧಿಯು ಮುಕ್ತಾಯವಾದ ಹಿನ್ನೆಲೆಯಲ್ಲಿ, 2011 ರಲ್ಲಿ ಮತ್ತೊಂದು ಸಂವಿಧಾನಾತ್ಮಕ ತಿದ್ದುಪಡಿ ತಂದು 1976 ರ ಜನಗಣತಿಯನ್ನು 2026 ರವರೆಗೆ ಅನುಸರಿಸಬೇಕೆಂದು ನಿರ್ಧರಿಸಲಾಗಿದೆ. ಆದರೆ, ಇದೀಗ ಮೋದಿ ಸರ್ಕಾರ 2011 ರ ಜನಗಣತಿಯನ್ನು ಅನುಸರಿಸುವಂತೆ 15ನೇ ಹಣಕಾಸು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ದಕ್ಷಿಣ ರಾಜ್ಯಗಳ ವಿರೋಧಕ್ಕೆ ಕಾರಣವಾಗಿದೆ.