ಕಲ್ಬುರ್ಗಿ: ಹಿಂದುಳಿದ ವರ್ಗದವರ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಬೇಕೆಂದು ನರೇಂದ್ರ ಮೋದಿ ಸರ್ಕಾರ ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆರೋಪಿಸಿದರು. 


COMMERCIAL BREAK
SCROLL TO CONTINUE READING

ಸೋಮವಾರ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಒಬಿಸಿ ಸಮುದಾಯಕ್ಕಾಗಿ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅಮಿತ್ ಶಾ ಅವರು, ಸದಾ 'ಅಹಿಂದ' ಜಪ ಮಾಡುವ ಸಿದ್ದರಾಮಯ್ಯ ಕೇವಲ ಆ ಸಮುದಾಯವನ್ನು ಮತಗಳಿಕೆಗಷ್ಟೆ ಬಳಸಿಕೊಳ್ಳುತ್ತಿದ್ದಾರೆ. ಆದರೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು. 


ಕಾಂಗ್ರೆಸ್ ಸರ್ಕಾರಕ್ಕೆ ಸದಾ ಮುಸ್ಲಿಮರದ್ದೇ ಚಿಂತೆ ಅವರನ್ನು ಬಿಟ್ಟರೆ ಇನ್ನಾವ ಹಿಂದುಳಿದ ವರ್ಗಗಳ ಬಗ್ಗೆಯೂ ಅವರಿಗೆ ಕಾಳಜಿ ಇಲ್ಲ ಎಂದು ಆರೋಪಿಸಿದ ಅಮಿತ್ ಷಾ, ರಾಜ್ಯದಲ್ಲಿ ಪರಿವರ್ತನೆ ಆಗಬೇಕೆಂದರೆ ಅದು ಹಿಂದುಳಿದ ವರ್ಗದ ಜನರಿಂದಲೇ ಸಾಧ್ಯ, ಹಾಗಾಗಿ ಕಾಂಗ್ರೆಸ್ ಅನ್ನು ಕಿತ್ತೊಗೆಯಲು ಹಿಂದುಳಿದ ವರ್ಗದ ಜನರು ಪಣ ತೊಡಬೇಕು ಎಂದು ಅಬ್ಬರಿಸಿದರು. 


ಮುಂದುವರೆದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿದ್ಯುತ್ ಫ್ಯಾಕ್ಟರಿಗೆ ಹೋಲಿಸಿದ ಅಮಿತ್ ಶಾ,  ಸಿದ್ದರಾಮಯ್ಯ ಅವರನ್ನು ಸುಟ್ಟುಹೋದ ವಿದ್ಯುತ್ ಪರಿವರ್ತಕಕ್ಕೆ ಹೋಲಿಸಿದರು. ಮೋದಿಯಿಂದ ಬರುವ ಅಭಿವೃದ್ಧಿ ಯೋಜನೆಗಳೆಂಬ ವಿದ್ಯುತ್‌ ಅನ್ನು ರಾಜ್ಯಕ್ಕೆ ಹಂಚಬೇಕಾದ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದೆ. ಹಾಗಾಗಿ ಅದನ್ನು ಕಿತ್ತು ಬಿಸಾಡಿ ಬಿಜೆಪಿಗೆ ಮತ ನೀಡಿ, ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಿರಿ ಎಂದರು. 



ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಸೇರಿದಂತೆ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.