ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಆರಂಭವಾಗಿದೆ. ಅದಕ್ಕಾಗಿ ರಾಜ್ಯದ ಇತರ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಚುನಾವಣಾ ನಿರ್ವಹಣಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಉತ್ತರಪ್ರದೇಶ ಚುನಾವಣಾ ಫಲಿತಾಂಶದಂತೆ ಕರ್ನಾಟಕದಲ್ಲೂ ಫಲಿತಾಂಶ ಬರಲಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕೆಂದು ಸಂಕಲ್ಪ ಮಾಡಿದ್ದಾರೆ. ಈ ಹಿಂದಿನ ಯಾವ ಚುನಾವಣೆಯಲ್ಲಿಯೂ ಕೇಂದ್ರದಿಂದ ಇಂಥ ಸಹಕಾರ ಸಿಕ್ಕಿರಲಿಲ್ಲ ಎಂದು ಯಡಿಯೂರಪ್ಪ ಹೇಳಿದರು.


ತಮ್ಮ ಕ್ಷೇತ್ರದಲ್ಲೇ ಗೆಲ್ಲಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬೇರೆ ಕ್ಷೇತ್ರಗಳ ಹುಡುಕಾಟದಲ್ಲಿದ್ದಾರೆ. ಸಿದ್ದರಾಮಯ್ಯ ಅವರ ಸೋಲು ಮೈಸೂರಿನಿಂದಲೇ ಆರಂಭವಾಗಿದೆ. ಮೈಸೂರಿನ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತ್ತು ಅವರ ಮಗನನ್ನು ಸೋಲಿಸುವ ಎಲ್ಲ ತಂತ್ರಗಳನ್ನು ಹೆಣೆಯಲಾಗಿದೆ. ಈಗಾಗಲೇ 72 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಈ ಬಾರಿ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.