ಬೆಂಗಳೂರು: ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ಬಜೆಟ್ ನ್ನು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ 'ಇದು ಅತ್ಯಂತ ನಿರಾಶಾದಾಯಕ, ಅಡ್ಡ ಕಸುಬಿ ಬಜೆಟ್.ಈ ಬಜೆಟ್ ಗೆ ಅಭಿವೃದ್ಧಿಯ ಮುನ್ನೋಟವೇ ಇಲ್ಲ. ಬಿಜೆಪಿಯವರ ಮಾತುಗಳಿಗೇ ಈ ಬಜೆಟ್ ವಿರುದ್ಧವಾಗಿದೆ' ಎಂದು ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

"ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಬಜೆಟ್ ಮಂಡಿಸಿದ್ದಾರೆ. ಅವರು ತಮ್ಮ ಮಾತುಗಳ ಮೂಲಕ ಜನರಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ್ದರು. 'ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುತ್ತೇವೆ', ಭವಿಷ್ಯಕ್ಕಾಗಿ ಧೃಡ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದರು. ಆದರೆ ಬಜೆಟ್ ನೋಡಿದ ಮೇಲೆ ಅವರ ಮಾತುಗಳು ಹುಸಿಯಾಗಿವೆ. ಇದು ಅತ್ಯಂತ ನೀರಸ, ಅಭಿವೃದ್ಧಿಯ ವಿರೋಧಿ, ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ.ಬಜೆಟ್ (Karnataka Budget 2022) ಎಂದರೆ ಜನರಿಗೆ ಕನಸು ಕಟ್ಟಿಕೊಡುವಂತಿರಬೇಕು, ನಾಡಿನ ಎಲ್ಲ ಜನರ ಭವಿಷ್ಯದ ಮುನ್ಸೂಚನೆಯಂತಿರಬೇಕು. ನಮ್ಮ ಸರ್ಕಾರದ ಅವಧಿಯಲ್ಲಿ ಇಲಾಖಾವಾರು ಮಾಹಿತಿಯನ್ನು ಜನರಿಗೆ ಪಾರದರ್ಶಕವಾಗಿ ಕೊಡುತ್ತಿದ್ದೆವು. ಹಿಂದಿನ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ನೀಡಿದ್ದೆವು, ಎಷ್ಟು ಖರ್ಚಾಗಿತ್ತು, ಮುಂದೆ ಎಷ್ಟು ನೀಡುತ್ತಿದ್ದೇವೆ, ಹೀಗೆ ಇಲಾಖೆಯ ಪ್ರಗತಿಯನ್ನು ಪಾರದರ್ಶಕವಾಗಿ ನೀಡಿದ್ದೆವು, ಈಗ ಹಾಗಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ಮೇಲಿಂದ ವಲಯವಾರು ಬಜೆಟ್ ಮಂಡನೆ ಮಾಡಲು ಆರಂಭಿಸಿದರು. ಇದರಿಂದ ಹಿಂದೆ ಇದ್ದ ಪಾರದರ್ಶಕತೆ ಈಗ ಇಲ್ಲವಾಗಿದೆ " ಎಂದು ಅವರು ಕಿಡಿಕಾರಿದರು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳು ಎಂದು ಮಾಡಿದ್ದಾರೆ. 
ಮೊದಲನೆಯದು: ರಾಜ್ಯದ ಸಮಗ್ರ ಸಾಮಾಜಿಕ, ಆರ್ಥಿಕ ಅಭಿವೃದ್ಧಿ.
ಎರಡನೆಯದು: ದುರ್ಬಲ ವರ್ಗದವರ ರಕ್ಷಣೆ ಮತ್ತು ಏಳಿಗೆ.
ಮೂರನೆಯದು: ರಾಜ್ಯದ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿ ಮಾಡುವುದು.
ನಾಲ್ಕನೆಯದು: ಕೃಷಿ, ಕೈಗಾರಿಕಾ, ಸೇವಾ ವಲಯಗಳಲ್ಲಿ ಜನರನ್ನು ಪಾಲುದಾರರಾಗಿ ಮಾಡುವುದು.
ಐದನೆಯದು: ಹೊಸ ಚಿಂತನೆ, ಹೊಸ ಚೈತನ್ಯ, ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡುವುದು.ಆದರೆ ಬಜೆಟ್ ನ ಅಂಶಗಳು ಈ ಪಂಚ ಸೂತ್ರಗಳಿಗೆ ತದ್ವಿರುದ್ಧವಾಗಿದೆ" ಎಂದು ಅವರು ಟೀಕಿಸಿದ್ದಾರೆ.


"ಸ್ವಾತಂತ್ರ್ಯ ಬಂದ ನಂತರದಿಂದ 2018-19 ರ ನಮ್ಮ ಸರ್ಕಾರದ ಕೊನೆಯ ಬಜೆಟ್ ವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ ರೂ. 2,42,000 ಕೋಟಿ. ಮುಂದಿನ ವರ್ಷದ ಮಾರ್ಚ್ ವೇಳೆಗೆ ರಾಜ್ಯದ ಒಟ್ಟು ಸಾಲ ರೂ. 5,18,000 ಕೋಟಿ ಆಗುತ್ತೆ. 2017-18 ರಲ್ಲಿ ಸಾಲದ ಮೇಲಿನ ಬಡ್ಡಿ ರೂ. 13,000 ಕೋಟಿ ಇತ್ತು, ಈಗದು ರೂ. 29,000 ಗೂ ಹೆಚ್ಚಾಗಿದೆ. ಅಸಲು ಸೇರಿದರೆ ಸುಮಾರು ರೂ. 45,000 ಕೋಟಿ ಪ್ರತೀ ವರ್ಷ ಪಾವತಿ ಮಾಡಬೇಕಿದೆ. ಈಗಿನ ಬಜೆಟ್ ಗಾತ್ರ ರೂ. 2,65,720 ಕೋಟಿ ಇದೆ. ಬಿಜೆಪಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರೂ. 2,66,000 ಕೋಟಿ ಸಾಲ ಮಾಡಿದೆ." ಎಂದು ಅವರು ಹೇಳಿದರು.


"ನಮ್ಮ ಐದು ವರ್ಷಗಳ ಆಡಳಿತದಲ್ಲಿ ರಾಜಸ್ವ ಉಳಿಕೆ ಬಜೆಟ್ ಇತ್ತು, ಬಿಜೆಪಿ ಬಂದ ಮೇಲೆ ರಾಜಸ್ವ ಕೊರತೆ ಆರಂಭವಾಗಿದೆ.ಇದು ನಮ್ಮ ಮತ್ತು ಬಿಜೆಪಿ ಸರ್ಕಾರದ ನಡುವಿನ ವ್ಯತ್ಯಾಸ. ಈಗ ರಾಜಸ್ವ ಕೊರತೆ ಇರುವುದರಿಂದ ಸಾಲ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಆಸ್ತಿ ಸೃಜನೆಗೆ ಹಣ ಖರ್ಚು ಮಾಡುವಂತಾಗಿದೆ. ಮುಂಬರುವ ಸಾಲಿನಲ್ಲಿ ರೂ. 15,000 ಕೋಟಿ ರಾಜಸ್ವ ಕೊರತೆ ಆಗುತ್ತೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಕಳೆದ ಬಾರಿ ಬದ್ಧತಾ ಖರ್ಚು 102% ಆಗಿತ್ತು ಎಂದು ಹೇಳಿದ್ದರು, ಆದರೆ ಈ ಬಾರಿ ಅದರ ಬಗ್ಗೆ ಎಲ್ಲೂ ಮಾಹಿತಿ ನೀಡಿಯೇ ಇಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಬದ್ಧತಾ ಖರ್ಚು ಸುಮಾರು 80% ಇತ್ತು " ಎಂದು ಅವರು ಹೇಳಿದರು.


ಇದನ್ನೂ ಓದಿ: Karnataka Budget 2022: ಬೆಂಗಳೂರು ಮೆಟ್ರೋ 3ನೇ ಹಂತದ ಕಾಮಗಾರಿಗೆ ಸಿಕ್ಕಿದ್ದೆಷ್ಟು?


ಈ ವರ್ಷದ ಜೂನ್ 30ರ ವರೆಗೆ ಮಾತ್ರ ನಮ್ಮ ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರ ಸಿಗುತ್ತದೆ. ಹಾಗಾಗಿ ಮುಂದಿನ ದಿನಗಳು ಇನ್ನಷ್ಟು ಕಷ್ಟದಾಯಕವಾಗಿರಲಿದೆ. ಇದೇ ಕಾರಣಕ್ಕೆ ಜಿ.ಎಸ್.ಟಿ ಪರಿಹಾರವನ್ನು ಇನ್ನೂ ಐದು ವರ್ಷ ಮುಂದುವರೆಸಲು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿ ಎಂದು ನಾನು ಸಲಹೆ ನೀಡಿದ್ದೆ. ಆದರೆ ಈ ಬಾರಿಯ ಕೇಂದ್ರದ ಬಜೆಟ್ ನಲ್ಲಿ ಇದನ್ನು ಮುಂದುವರೆಸುವ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ, ರಾಜ್ಯ ಸರ್ಕಾರ ಕೂಡ ಮೂರು ವರ್ಷ ಮುಂದುವರೆಸಲು ಮನವಿ ಮಾಡಿದ್ದೀವಿ ಎಂದಷ್ಟೇ ಹೇಳಿದೆ. ಒಂದು ವೇಳೆ ಕೇಂದ್ರ ಸರ್ಕಾರ ಜಿ.ಎಸ್.ಟಿ ಪರಿಹಾರ ಕೊಡದೆ ಹೋದರೆ ರಾಜಸ್ವ ಸಂಗ್ರಹ ಕಡಿಮೆಯಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತವೆ. ವರ್ಷಕ್ಕೆ ಸುಮಾರು ರೂ. 10 ರಿಂದ 12 ಸಾವಿರ ಕೋಟಿ ನಷ್ಟವಾಗುತ್ತದೆ.ಜಿ.ಎಸ್.ಟಿ ಸಭೆಯಲ್ಲಿ ಎಲ್ಲಾ ಮುಖ್ಯಮಂತ್ರಿಗಳು ಸೇರಿ ಗಲಾಟೆ ಮಾಡಿ ಇನ್ನೂ ಐದು ವರ್ಷ ಮುಂದುವರೆಸುವಂತೆ ಒತ್ತಾಯ ಮಾಡಬೇಕಿತ್ತು. ಇವರು ಅದನ್ನು ಮಾಡಿಲ್ಲ. ಇದೇ ಕಾರಣಕ್ಕೆ ನಾನು ಈ ಸರ್ಕಾರವನ್ನು ಹೇಡಿಗಳ ಸರ್ಕಾರ ಎಂದು ಕರೆದದ್ದು." ಎಂದು ಟೀಕಾಪ್ರಹಾರ ನಡೆಸಿದರು.


"ಬಿಜೆಪಿಯವರು ನೀರಾವರಿ ಬಗ್ಗೆ ಬಹಳ ಮಾತಾಡುತ್ತಿದ್ದರು. 2018 ರ ನಮ್ಮ ಬಜೆಟ್ ನಲ್ಲಿ ನೀರಾವರಿ ಯೋಜನೆಗಳಿಗೆ ಇಟ್ಟಿದ್ದ ಹಣ ರೂ. 18,112 ಕೋಟಿ. ಈ ಸರ್ಕಾರ ಬಜೆಟ್ ನಲ್ಲಿ ಇಟ್ಟಿರುವ ಹಣ ರೂ. 20,601 ಕೋಟಿ. ನಮ್ಮ ಬಜೆಟ್ ಗಾತ್ರ ರೂ. 2.02 ಲಕ್ಷ ಕೋಟಿ, ಈಗಿನ ಬಜೆಟ್ ಗಾತ್ರ ರೂ. 2.65 ಲಕ್ಷ ಕೋಟಿ. ಬಿಜೆಪಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀರಾವರಿಗೆ ಐದು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡ್ತೀವಿ ಎಂದಿದ್ದರು. ಅಂದರೆ ಈ ವರ್ಷ ಕನಿಷ್ಠ ರೂ. 30,000 ಕೋಟಿಯಾದರೂ ಇಡಬೇಕಲ್ವ? ಈ ವರೆಗೆ ಬಿಜೆಪಿ ಸರ್ಕಾರ ಖರ್ಚು ಮಾಡಿರುವುದು ಸುಮಾರು ರೂ. 40,000 ಕೋಟಿ. ಈ ವರ್ಷದ 20,000 ಕೋಟಿ ರೂಪಾಯಿ ಸೇರಿಸಿದ್ರೂ ರೂ. 60,000 ಕೋಟಿ ಆಗುತ್ತೆ. ಸಾಕ? ಹಿಂದೆ ನಮ್ಮ ಸರ್ಕಾರ ಇದ್ದಾಗ ಗೋವಿಂದ ಕಾರಜೋಳ ನೀರಾವರಿ ಬಗ್ಗೆ ಭಾಷಣ ಮಾಡುವಾಗ ನೀರಾವರಿ ಕನಿಷ್ಠ ರೂ. 25,000 ಕೋಟಿ ಇಡಿ ಎನ್ನುತ್ತಿದ್ದರು.ಈಗ ಏನಂತಾರೆ? ನನ್ನ ಪ್ರಕಾರ ಕನಿಷ್ಠ ರೂ. 10,000 ಕೋಟಿಗೂ ಅಧಿಕ ಮೊತ್ತದ ಬಾಕಿ ಬಿಲ್ ಗಳಿವೆ. ಅದನ್ನೂ ಕೊಟ್ಟರೆ ಹೊಸ ನೀರಾವರಿ ಯೋಜನೆಗಳಿಗೆ ಉಳಿಯೋದು ಕೇವಲ ರೂ. 10,000 ಕೋಟಿ.ಇದರಲ್ಲಿ ಸಣ್ಣ ನೀರಾವರಿ ಯೋಜನೆಗಳು ಬೇರೆ ಸೇರಿದೆ. ಅದಕ್ಕೆ ಕನಿಷ್ಠ ರೂ. 3,000 ಕೋಟಿ ಬೇಕು. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ.ಬಸವರಾಜ ಬೊಮ್ಮಾಯಿ ಅವರ ಬಡಾಯಿ ಬಜೆಟ್ ಇದು" ಎಂದು ಅವರು ವ್ಯಂಗ್ಯವಾಡಿದರು.


ಇದನ್ನೂ ಓದಿ: Karnataka Budget: ಬಸವರಾಜ ಬೊಮ್ಮಾಯಿ‌ ಚೊಚ್ಚಲ ಬಜೆಟ್ ಮೇಲೆ ಅಪಾರ ನಿರೀಕ್ಷೆಗಳು


ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂಬುದು ನಮ್ಮ ಒತ್ತಾಯ.ಆದರೆ ಪರಿಸರ ಅನುಮತಿ ಪತ್ರ ಪಡೆಯದೆ ಯೋಜನೆ ಹೇಗೆ ಆರಂಭ ಮಾಡುತ್ತಾರೆ? ಬಜೆಟ್ ನಲ್ಲಿ ಹಣ ಇಟ್ಟ ಕೂಡಲೆ ಯೋಜನೆ ಆರಂಭ ಆಗುತ್ತಾ? ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವ ಸಮಸ್ಯೆ ಇಲ್ಲ, ಆದರೂ ಅದನ್ನೂ ಆರಂಭ ಮಾಡಿಲ್ಲ. ಬಹಳಷ್ಟು ಇಲಾಖೆಗಳಿಗೆ ನಾವು 2018 ರ ಬಜೆಟ್ ನಲ್ಲಿ ಕೊಟ್ಟಷ್ಟು ಹಣವನ್ನೂ ಕೊಟ್ಟಿಲ್ಲ.


"2018- 19 ರಲ್ಲಿ ನಾವು ಆಹಾರ ಇಲಾಖೆಗೆ ರೂ. 3,882 ಕೋಟಿ ಇಟ್ಟಿದೆವು. ಈ ಸರ್ಕಾರ 2,998 ಕೋಟಿ ಇಟ್ಟಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನಾವು 5,371 ಕೋಟಿ ರೂಪಾಯಿ ನೀಡಿದ್ದೆವು, ಈಗಿನ ಬಜೆಟ್ ನಲ್ಲಿ ರೂ. 4,713 ಕೋಟಿ ಇಟ್ಟಿದ್ದಾರೆ. ರೂ.658 ಕೋಟಿ ಕಡಿಮೆಯಾಗಿದೆ. ವಸತಿ ಯೋಜನೆಗೆ ನಮ್ಮ ಸರ್ಕಾರ ರೂ. 3,942 ಕೋಟಿ ನೀಡಿತ್ತು, ಈಗಿನ ಬಜೆಟ್ ನಲ್ಲಿ ರೂ. 3,594 ಕೋಟಿ ಇಟ್ಟಿದ್ದಾರೆ. ಅಂದರೆ ರೂ. 348 ಕೋಟಿ ಕಡಿಮೆ ಆಗಿದೆ. ನಗರಾಭಿವೃದ್ಧಿ ಯೋಜನೆಗಳಿಗೆ ನಾವು ರೂ. 17,196 ಕೋಟಿ ಇಟ್ಟಿದ್ದೆವು, ಈ ಸರ್ಕಾರ ರೂ.16,076 ಕೋಟಿ ಇಟ್ಟಿದೆ. ಅಂದರೆ ರೂ. 1,120 ಕೋಟಿ ಅನುದಾನ ಕಡಿಮೆ ಆಗಿದೆ. ಯಡಿಯೂರಪ್ಪ ಅವರು ಬೆಂಗಳೂರಿನ ಚಿತ್ರಣವನ್ನೇ ಬದಲಾಯಿಸ್ತೀನಿ ಅಂತ ಹೇಳಿದ್ದೇ ಹೇಳಿದ್ದು. ಇದೇನಾ ಅವರ ಅಭಿವೃದ್ಧಿ? " ಎಂದು ಸಿದ್ಧರಾಮಯ್ಯನವರು (Siddaramaiah) ಪ್ರಶ್ನಿಸಿದರು.


ಇದನ್ನೂ ಓದಿ: ಕರ್ನಾಟಕದ ಬಜೆಟ್ ಇತಿಹಾಸ: ನೀವು ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿಗಳು


ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಗೆ ನಾವು ಹಣ ಮೀಸಲಿಡುತ್ತಿದ್ದೆವು.ನಮ್ಮ ಸರ್ಕಾರದ ಕಡೇ ಬಜೆಟ್ ನಲ್ಲಿ ಈ ವರ್ಗದವರಿಗೆ ರೂ. 29,000 ಕೋಟಿಗೂ ಅಧಿಕ ಅನುದಾನ ನೀಡಿದ್ದೆ. ಈ ಸರ್ಕಾರ ನಾಲ್ಕು ವರ್ಷದ ನಂತರ ಕೂಡ ರೂ. 28,000 ಕೋಟಿಯಲ್ಲೇ ಇದೆ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ನೀಡುವ ಹಣ ಕೂಡ ಹೆಚ್ಚಾಗಬೇಕು.ನನ್ನ ಪ್ರಕಾರ ಈ ಸಲದ ಬಜೆಟ್‌ನಲ್ಲಿ ಕನಿಷ್ಟ ರೂ. 40,000 ಕೋಟಿ ಆದರೂ ಆಗಬೇಕಿತ್ತು. ಹಿಂದುಳಿದ ಜಾತಿಗಳ ಕಲ್ಯಾಣದ ಅನುದಾನ ಕಡಿಮೆಯಾಗಿದೆ, ಇನ್ನು ಅಲ್ಪಸಂಖ್ಯಾತರ ಹೆಸರೇ ಹೇಳಲ್ಲ ಇವರು.ನಮ್ಮ ಸರ್ಕಾರದ 2018 ರ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ರೂ. 3,150 ಕೋಟಿ ಅನುದಾನ ಇಟ್ಟಿದ್ದೆ" ಎಂದು ಹೇಳಿದರು.


"ದೀನದಯಾಳು ಉಪಾಧ್ಯಾಯ ಅವರ ಹೆಸರಿನಲ್ಲಿ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಮಾಡುವುದಾಗಿ ಹೇಳಿದ್ದಾರೆ, ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ. 200 - 300 ಮಕ್ಕಳ ಹಾಸ್ಟೆಲ್ ಮಾಡಿದರೆ ಅದೇ ದೊಡ್ಡದು. ನಾಲ್ಕು ಕಡೆ ಸಾವಿರ ವಿದ್ಯಾರ್ಥಿಗಳ ಹಾಸ್ಟೆಲ್ ಮಾಡ್ತೀವಿ ಎಂದಿದ್ದಾರೆ, ಇದು ಅವಾಸ್ತವಿಕ ಮತ್ತು ಅಸಾಧ್ಯವಾದ ಕೆಲಸ. 
ಹಿಂದುಳಿದ ಜಾತಿಗಳೆಲ್ಲವೂ ಸೇರಿ ಅವುಗಳ ಅಭಿವೃದ್ಧಿ ನಿಗಮಗಳಿಗೆ ರೂ. 400 ಕೋಟಿ ನೀಡಿದ್ದರು. ಈ ವರ್ಷ ಅದೂ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.


"ಗೋಹತ್ಯೆ ನಿಷೇಧ ನಂತರ ಗೋಶಾಲೆ ಮಾಡುವುದಾಗಿ ಹೇಳಿದ್ದರು. ರಾಜ್ಯದಲ್ಲಿ ಈಗ 31 ಗೋಶಾಲೆಗಳಿವೆ, ಈ ಬಜೆಟ್‌ನಲ್ಲಿ ಅದನ್ನು 100 ಮಾಡುತ್ತೇವೆ ಎಂದಿದ್ದಾರೆ. ನನ್ನ ಪ್ರಕಾರ ಈಗ ರಾಜ್ಯದಲ್ಲಿರುವ ಬರಡು ದನಗಳನ್ನು ಗೋಶಾಲೆಗೆ ಕಳುಹಿಸಿದರೆ ಕನಿಷ್ಠ 500 ಗೋಶಾಲೆಗಳ ಅಗತ್ಯ ಇದೆ. ಇದನ್ನು ಮಾಡದಿದ್ದರೆ ಉತ್ತರ ಪ್ರದೇಶದಲ್ಲಿ ಆದಂತೆ ಬೀದಿ ಬೀದಿಯಲ್ಲಿ ದನಗಳು ಇರುತ್ತವೆ. ಪುಣ್ಯಕೋಟಿ ಹೆಸರಿನಲ್ಲಿ ಗೋವುಗಳನ್ನು ದತ್ತು ಪಡೆಯುವವರಿಗೆ ಸರ್ಕಾರ ರೂ. 11,000 ಕೊಡುವುದಾಗಿ ಹೇಳಿದೆ, ಈ ಹಣವನ್ನು ರೈತರಿಗೇ ಕೊಟ್ಟಿದ್ದರೆ ಅವರೇ ಸಾಕ್ತಿದ್ದರು. ಇದರಿಂದ ಜಾನುವಾರುಗಳ ಮಾಲಿಕರಾದ ರೈತರಿಗೆ ಅನ್ಯಾಯ ಆಗುತ್ತದೆ" ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.