ಮೈಸೂರು : ವೀರ ಮಕ್ಕಳ ಕುಣಿತ ಎಂದರೆ ನನಗೆ ಅಚ್ಚುಮೆಚ್ಚು ಎಂದು ಹೇಳುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಾಲ್ಯದ ವೀರ ಮಕ್ಕಳ ಕುಣಿತದ ಅನುಭವವನ್ನು ಮೆಲುಕು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದ ಮೂಡಲ ಬಸವೇಶ್ವರ ದೇವಾಲಯದ ಜಾತ್ರೆಯಲ್ಲಿ ಭಾಗವಹಿಸಿದ್ದಾಗ ಮುಖ್ಯಮಂತ್ರಿ, ವೀರ ಮಕ್ಕಳ ಕುಣಿತ ಎಂದರೆ ನನಗೆ ಅಚ್ಚುಮೆಚ್ಚು, ಆ ಕುಣಿತದಲ್ಲಿ ನಾನು ನಂಬರ್ ಒನ್ ಆಗಿದ್ದೆ. ಆ ವೀರ ಮಕ್ಕಳ ಕುಣಿತದ ಜೊತೆ ಜೊತೆಗೇ ಬೆಳೆದವನು ನಾನು ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿಯಾದರೂ ತಮ್ಮ ಗ್ರಾಮೀಣ ಸೊಗಡನ್ನು ಬಿಡದ, ಅಲ್ಲದೆ ಅದನ್ನು ಹೆಮ್ಮೆಯಿಂದ ಪರಿಚಯಿಸುವ ಸಿದ್ದರಾಮಯ್ಯ ನಿಜಕ್ಕೂ ಆದರ್ಶ ವ್ಯಕ್ತಿ ಎಂದರೆ ಅತಿಶಯೋಕ್ತಿಯಲ್ಲ.


ಬಾಲ್ಯದಲ್ಲಿ ವೀರ ಮಕ್ಕಳ ಕುಣಿತದ ಜೊತೆಗಿನ ತಮ್ಮ ಬಾಂಧವ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಲುಕು ಹಾಕಿದ್ದು ಹೀಗೆ... 


ಆಗ ನನಗೆ 8-9 ವರ್ಷ. ವೀರ ಮಕ್ಕಳ ಕುಣಿತಕ್ಕಾಗಿ ಬೆಳಗುಂದ ಗ್ರಾಮಕ್ಕೆ ಒಮ್ಮೆ ಹೋಗಿದ್ದೆ. ವಾಪಸ್ ಬರುವ ದಾರಿಯಲ್ಲಿ ಸುತ್ತೂರು ಮಠಕ್ಕೂ ಹೋದೆ. ಮಠದ ಅಂದಿನ ಸ್ವಾಮಿಗಳು ಕರೆದು ಚೆನ್ನಾಗಿ ಕುಣಿಯುವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಐದು ರೂಪಾಯಿ ಕೊಟ್ಟಿದ್ದನ್ನು ಇಂದಿಗೂ ಮರೆತಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳು ನೆನಪಿನ ಅಂಗಳಕ್ಕೆ ಜಾರಿದರು. ತಮ್ಮ ನೆನಪಿನ ಅಂಗಳಕ್ಕೆ ಸಭಿಕರನ್ನೂ ಕರೆದೊಯ್ದ ಅವರು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ, ಗೌರವ ಹಾಗೂ ಜಾತ್ಯತೀತ ಮನೋಭಾವದೊಂದಿಗೆ ಬೆರೆಯಲು ಕಲಿಸಿ ಕೊಟ್ಟಿದ್ದೇ ವೀರ ಮಕ್ಕಳ ಕುಣಿತ ಎಂದು ಆ ಕಲೆಯ ವೈಭವವನ್ನು ಸ್ಮರಿಸಿದರು.