ರಾಜ್ಯಕ್ಕೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ `ಧಮ್ ನಿಮಗಿದೆಯೇ ಕಟೀಲ್ ಅವರೇ? -ಸಿದ್ಧು ಪ್ರಶ್ನೆ
ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡುವುದಾಗಿ ಹೇಳಿದೆ.
ಬೆಂಗಳೂರು: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಮತದಾನಕ್ಕೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಬಿಹಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡುವುದಾಗಿ ಹೇಳಿದೆ.
ಬಿಜೆಪಿ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿಯೂ ಕೂಡ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಕೊರೊನಾ ಲಸಿಕೆಯನ್ನು ಬಿಹಾರಕ್ಕೆ ಮಾತ್ರ ಕೊಡಲಾಗುತ್ತಿದೆಯೇ ? ಬೇರೆ ರಾಜ್ಯಗಳಿಗೆ ಇಲ್ಲವೇ ಎಂದು ಆಮ್ ಆದ್ಮಿ ಪಕ್ಷವೂ ಟೀಕಿಸಿತ್ತು.
ನಳಿನ್ ಕುಮಾರ್ ಕಟೀಲಿಗೆ ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬು ಇಲ್ಲ-ಸಿದ್ಧರಾಮಯ್ಯ
ಇವತ್ತು ಬಿಜೆಪಿಯ ಈ ಘೋಷಣೆಗೆ ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ 'ಪ್ರಾಣ ರಕ್ಷಕ ಕೊರೊನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿರುವ ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಿರಾ ನಳಿನ್ ಕುಮಾರ್ ಕಟೀಲ್ ಅವರೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಂದುವರೆದು 'ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರ ಮನವೊಲಿಸಿ,
ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕೊರೊನಾದಿಂದ ಭೀತಿಗೊಳಗಾಗಿರುವ ಜನರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ 'ಧಮ್' (ಇದು ನಿಮ್ಮದೇ ಭಾಷೆ) ನಿಮಗಿದೆಯೇ ಶ್ರೀ ನಳಿನ್ ಕುಮಾರ್ ಕಟೀಲ್ ಅವರೇ? ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.