ಕಟ್ಟು ಕತೆ, ಊಹೆಗಳು ಇಂದಿನ ಪತ್ರಿಕೋದ್ಯಮಕ್ಕೆ ಮಾರಕ: ಮಾಜಿ ಸಿಎಂ ಸಿದ್ದರಾಮಯ್ಯ
ಎಲ್ಲೋ ಕುಳಿತು ಊಹೆಯ ಆಧಾರದ ಮೇಲೆ ಸುದ್ದಿ ಪ್ರಸಾರ ಮಾಡುವುದು ತಪ್ಪಲ್ಲವೇ?- ಮಾಧ್ಯಮಗಳನ್ನು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹುಬ್ಬಳ್ಳಿ: ಮೊನ್ನೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದೆ, ಆದರೆ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದೇನೆ ಎಂದು ತೋರಿಸಲಾಗಿದೆ. ಎಲ್ಲೋ ಕುಳಿತು ಊಹೆಯ ಆಧಾರದ ಮೇಲೆ ಸುದ್ದಿ ಪ್ರಸಾರ ಮಾಡುವುದು ತಪ್ಪಲ್ಲವೇ? ಈ ರೀತಿಯ ಕಟ್ಟು ಕತೆ, ಊಹೆಗಳು ಇಂದಿನ ಪತ್ರಿಕೋದ್ಯಮಕ್ಕೆ ಮಾರಕವಾದುದ್ದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರ ಇನ್ನು ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂಬ ಕೆಲವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಸುಭದ್ರವಾಗಿದೆ. ಮುಂದಿನ ನಾಲ್ಕು ವರ್ಷಗಳು ಕೂಡ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸಲಿದೆ. ಈ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಬೇರೆಯವರಿಗೆ ಏಕೆ ಈ ಬಗ್ಗೆ ಆಗಾಗ್ಗೆ ಅನುಮಾನ ಮೂಡುತ್ತದೋ ನನಗೆ ತಿಳಿಯದು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಿಶ್ಚಿತ, ಈ ಬಗ್ಗೆ ಸಂಶಯವೇ ಇಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹೇಳಿಕೆ ನೀಡಿದ್ದರು. ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಎಲ್ಲಾ ಕಾಂಗ್ರೆಸ್ ನಾಯಕರ ಕೈಯಲ್ಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದು ಎಂದು ಕಾಂಗ್ರೆಸ್‌ನವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಅಂದು ಓಡೋಡಿ ಬಂದರು ಎಂದು ವ್ಯಂಗ್ಯವಾಡಿದ್ದ ದೇವೇಗೌಡರು, ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದಿದ್ದೆ. ಕಾಂಗ್ರೆಸ್‌ಗೆ ಸರ್ಕಾರ ನಡೆಸುವ ಮನಸ್ಸಿದೆಯಾ? ಇಲ್ವಾ? ನಂಗೆ ಗೊತ್ತಿಲ್ಲ. ಇಲ್ಲಿ ಎಲ್ಲದಕ್ಕೂ ಆಕ್ಷನ್ ಆಂಡ್ ರಿಯಾಕ್ಷನ್ ನೆಸೆಸರಿ ಇಲ್ಲ ಎಂದಿದ್ದರು.