GST Rates Hike: ಬಡವರ ಹೊಟ್ಟೆಗೆ ಒದೆಯುವುದೇ ಪ್ರಧಾನಿ ಮೋದಿಯವರ ‘ಅಚ್ಚೇ ದಿನ್’- ಸಿದ್ದರಾಮಯ್ಯ
ಗುಡಿಕೈಗಾರಿಕೆಗಳ ರೂಪದಲ್ಲಿ ಅಕ್ಕಿ, ಗೋಧಿ, ಹಾಲು, ಮೊಸರು ಮತ್ತಿತರ ಅಗತ್ಯವಸ್ತುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಲಕ್ಷಾಂತರ ಕಿರುಉದ್ಯಮಿಗಳಿಗೆ ಇದೊಂದು ದೊಡ್ಡ ಹೊಡೆತವೆಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ‘ಬಡವರ ಹೊಟ್ಟೆಗೆ ಒದೆಯುವುದೇ ‘ಅಚ್ಚೇ ದಿನ್’ ಎಂದು ತಿಳಿದುಕೊಂಡಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಊಟದ ತಟ್ಟೆಯಲ್ಲಿನ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆ, ಮೀನು, ಮಾಂಸ, ಮಂಡಕ್ಕಿ ಎಲ್ಲವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಬಡವರ ಹತ್ಯೆಗೆ ಸಮನಾದ ಪಾಪ ಕರ್ಮ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಆಹಾರ ಪದಾರ್ಥಗಳ ಮೇಲಿನ ಜಿಎಸ್‍ಟಿ ವಿರೋಧಿಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸಿದ್ದಾರೆ. ‘ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳದಿಂದ ತರಕಾರಿ ಮತ್ತಿತರ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ, ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿದಿದೆ. ಈ ಹೊತ್ತಿನಲ್ಲಿ ಬಡವರ ನೆರವಿಗೆ ಬರಬೇಕಾಗಿರುವ ಸರ್ಕಾರ ಅವರನ್ನು ಉಪವಾಸ ಬೀಳಿಸಿ ಸಾಯಿಸಲು ಹೊರಟಿದೆ. ಇಂತಹ ಕ್ರೌರ್ಯ ಫ್ಯಾಸಿಸ್ಟ್ ಮನಸ್ಸುಗಳಿಂದ ಮಾತ್ರ ಸಾಧ್ಯ’ವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಾ ಖಾನೆದುಂಗಾ’ ಎನ್ನುತ್ತಿದ್ದ ಪ್ರಧಾನಿ ಮೋದಿ ‘ನಾ ಬಾತ್ ಕರೂಂಗಾ’ ಎಂಬಂತೆ ಮೌನ ವಹಿಸಿದ್ದಾರೆ: ಕಾಂಗ್ರೆಸ್
‘ಬ್ರ್ಯಾಂಡೆಡ್ ಅಲ್ಲದ ಪ್ಯಾಕ್ ಮಾಡಲಾಗಿರುವ ಅಕ್ಕಿ, ಗೋಧಿ, ಹಾಲು, ಮೊಸರು, ಮಜ್ಜಿಗೆಯಂತಹ ದಿನಬಳಕೆಯ ವಸ್ತುಗಳ ಮೇಲೆ ಪ್ರಧಾನಿ ಮೋದಿ ಸರ್ಕಾರ GST ಹೇರಿರುವುದು ಬ್ರ್ಯಾಂಡೆಡ್ ವಸ್ತುಗಳ ಕಂಪೆನಿಗಳ ಒತ್ತಡಕ್ಕೆ ಮಣಿದು ಎನ್ನುವುದು ಸ್ಪಷ್ಟ. ತಮ್ಮದು ಸೂಟ್ ಬೂಟ್ ಸರ್ಕಾರ ಎನ್ನುವುದನ್ನು ಮತ್ತೆ ಮತ್ತೆ ಅವರು ಸಾಬೀತುಪಡಿಸುತ್ತಿದ್ದಾರೆ. ತೆರಿಗೆ ವಂಚಿಸಿ, ಬ್ಯಾಂಕ್ ಮುಳುಗಿಸಿ ಓಡಿಹೋಗಿರುವ ಮೋದಿ, ಮಲ್ಯಗಳು ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಅವರನ್ನು ಎಳೆದುಕೊಂಡು ಬಂದು ವಂಚಿಸಿದ್ದ ತೆರಿಗೆ ಹಣವನ್ನು ಕಕ್ಕಿಸಲು ಆಗದ 56 ಎದೆಯಳತೆಯ ಪ್ರಧಾನಿ ಮೋದಿ ಬಡವರ ಹೊಟ್ಟೆ ಬಗೆಯಲು ಹೊರಟಿರುವುದು ದುರಂತ’ವೆಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಆಹಾರ ಪದಾರ್ಥಗಳ ಮೇಲಿನ GSTಗೆ ವಿರೋಧ: ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ
‘ಬ್ರ್ಯಾಂಡ್ ಗಳ ಬೆನ್ನತ್ತಿ ಹೋಗುತ್ತಿರುವ ಉಳ್ಳವರು, ಶ್ರೀಮಂತರು ಖರೀದಿಸುವ ವಸ್ತುಗಳ ಮೇಲೆ ತೆರಿಗೆ ಹೇರಿಕೆಗೆ ಕನಿಷ್ಠ ಸಮರ್ಥನೆ ಇದೆ. ಆದರೆ ಗುಡಿಕೈಗಾರಿಕೆಗಳ ರೂಪದಲ್ಲಿ ಅಕ್ಕಿ, ಗೋಧಿ, ಹಾಲು, ಮೊಸರು ಮತ್ತಿತರ ಅಗತ್ಯವಸ್ತುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಲಕ್ಷಾಂತರ ಕಿರುಉದ್ಯಮಿಗಳಿಗೂ ಕೂಡ ಇದೊಂದು ದೊಡ್ಡ ಹೊಡೆತ’ವೆಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಸಾವು-ಬದುಕಿನ ಪ್ರಶ್ನೆಯನ್ನು ದೇಶದ ಜನರ ಮುಂದಿಟ್ಟಿದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಅನಾಚಾರಗಳನ್ನೆಲ್ಲ ಸಹಿಸಿಕೊಂಡು ಇನ್ನೂ ಅಚ್ಚೇ ದಿನಗಳ ಕನಸು ಕಂಡರೆ ಬದುಕಿನ ನಾಶ ಖಂಡಿತ. ಕಾಲ ಮಿರಿಹೋಗುತ್ತಿದೆ, ಎಚ್ಚೆತ್ತುಕೊಳ್ಳಲು ಇದು ಸಕಾಲ’ವೆಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.